ಅಭ್ಯರ್ಥಿಗಳ ಆಯ್ಕೆಯಲ್ಲಿ ಕಸರತ್ತು ನಡೆಸುತ್ತಿರುವ ಕಾಂಗ್ರೇಸ್

ಬೆಂಗಳೂರು, ಮಾ.22- ಬಿಜೆಪಿಯನ್ನು ಸೋಲಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲೇ ಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆಯ್ಕೆ ಸಲುವಾಗಿ ನಿನ್ನೆಯಿಂದಲೂ ನವದೆಹಲಿಯಲ್ಲಿ ಭರ್ಜರಿ ಕಸರತ್ತು ನಡೆಸುತ್ತಿದೆ.

ಕಳೆದೆರಡು ತಿಂಗಳಿನಿಂದಲೂ ನಡೆಯುತ್ತಿರುವ ಕಸರತ್ತು ಅಂತಿಮ ಗೊಂಡಿದ್ದು, ರಾಹುಲ್‍ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಗೆ ಅಂಕಿತ ಹಾಕಲಾಗಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ನಂತರ ಕಾಂಗ್ರೆಸ್‍ಗೆ ಉಳಿದಿರುವ 20 ಲೋಕಸಭಾ ಕ್ಷೇತ್ರಗಳಿಗೂ ಇಂದು ಸಂಜೆಯೊಳಗಾಗಿ ಪಟ್ಟಿ ಪ್ರಕಟಗೊಳ್ಳಲಿದೆ.

ಅಭ್ಯರ್ಥಿಗಳ ಆಯ್ಕೆ ಸಂಬಂಧಪಟ್ಟಂತೆ ನಿನ್ನೆ ತಡರಾತ್ರಿಯವರೆಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನೇತೃತ್ವದ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿತು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ರಾಜ್ಯದ ಇತರ ಪ್ರಭಾವಿ ಮುಖಂಡರ ಜತೆ ಸಭೆ ನಡೆಸಿದ ಕೆ.ಸಿ.ವೇಣುಗೋಪಾಲ್ ಅವರು 20 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ಸ್ವರೂಪ ನೀಡಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಮಂಡಿಸಿದರು.

ಸ್ಕ್ರೀನಿಂಗ್ ಕಮಿಟಿ ಸದಸ್ಯರು ಸಲ್ಲಿಸಿದ್ದ ಪಟ್ಟಿಗೆ ಅಂಕಿತ ಹಾಕುವ ಮೂಲಕ ಲೋಕಸಭೆಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಕಳೆದ ಎರಡು ತಿಂಗಳಿನಿಂದಲೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ನಿರಂತರ ಕಸರತ್ತು ನಡೆಯುತ್ತಿತ್ತು.

ಜೆಡಿಎಸ್-ಕಾಂಗ್ರೆಸ್ ನಡುವಿನ ಮೈತ್ರಿಯಿಂದಾಗಿ ಜೆಡಿಎಸ್‍ಗೆ 8 ಸೀಟುಗಳನ್ನು ಬಿಟ್ಟುಕೊಡಲಾಯಿತು. ಉಳಿದ ಕ್ಷೇತ್ರಗಳ ಪೈಕಿ ಹಾಲಿ 9 ಮಂದಿ ಸಂಸದರಿಗೆ ಟಿಕೆಟ್ ಖಚಿತ ಪಡಿಸಲಾಗಿದೆ. ಉಳಿದಂತೆ ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಮೈಸೂರು, ಧಾರವಾಡ ಕ್ಷೇತ್ರಗಳಿಗೆ ಸಿದ್ದರಾಮಯ್ಯ ಅವರ ಬೆಂಬಲಿಗರಿಗೆ ಟಿಕೆಟ್ ಘೋಷಣೆಯಾಗಿದೆ.

ಪರಮೇಶ್ವರ್ ಆಪ್ತ ಮುದ್ದಹನುಮೇಗೌಡ ಸತತ ಪ್ರಯತ್ನದ ನಡುವೆಯೂ ಟಿಕೆಟ್ ಸಿಗದೆ ವಂಚಿತರಾಗಿದ್ದಾರೆ.

ರಾಜ್ಯದಲ್ಲಿ ಕನಿಷ್ಠ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬ ಗುರಿಹೊಂದಿರುವ ಜೆಡಿಎಸ್-ಕಾಂಗ್ರೆಸ್ ಮಿತ್ರ ಕೂಟ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಲವಾರು ರೀತಿಯ ಕಸರತ್ತುಗಳನ್ನು ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ