ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿದು ಅವಶೇಷಗಳ ಅಡಿ ಸಿಕ್ಕಿಹಾಕಿಕೊಂಡಿರುವ ಮೂವರು ಜೀವಂತವಾಗಿರುವ ಮಾಹಿತಿ ರಕ್ಷಣಾ ತಂಡಗಳಿಗೆ ಸಿಕ್ಕಿದೆ.
ದಿಲೀಪ್, ಸೋಮು ಮತ್ತು ಸಂಗೀತ ಎನ್ನುವರರು ಜೀವಂತವಾಗಿ ಅವಶೇಷಗಳ ಅಡಿ ಸಿಕ್ಕಿಹಾಕಿಕೊಂಡಿದ್ದಾರೆ.
ಈ ಮೂವರು ಪಾರ್ಕಿಂಗ್ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಬದುಕುಳಿದ ಮೂವರ ಪೈಕಿ ದಿಲೀಪ್ ಎಂಬುವವರು ಮಾಹಿತಿ ನೀಡಿದ್ದಾರೆ. ಅವರು ಇರುವುದು ಗೊತ್ತಾದ ತಕ್ಷಣವೇ ರಕ್ಷಣಾ ಸಿಬ್ಬಂದಿ ಅವರಿಗೆ ಆಕ್ಸಿಜನ್ ಪೂರೈಕೆ ಮಾಡಿದೆ. ಅವರು ಇರುವ ಸ್ಥಳವನ್ನು ಪ್ರವೇಶಿಸಲು ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸಿಬ್ಬಂದಿ ಪ್ರಯತ್ನವನ್ನು ಮುಂದುವರಿಸಿದೆ.
ಮೂವರು ಬದುಕುಳಿದಿರುವ ವಿಷಯ ತಿಳಿದ ತಕ್ಷಣವೇ ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗಳೂ ರಾತ್ರಿಯಿಂದ ಸ್ಥಳದಲ್ಲೇ ಇದ್ದಾರೆ.
ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆ ಆಗಿದೆ
ನಿರ್ಮಾಣ ಹಂತದ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆ ಆಗಿದೆ. ಕುಮಾರೇಶ್ವರ ನಗರ ನಿವಾಸಿಯಾಗಿದ್ದ ಅನೂಪ್ ಕುಡತರಕರ್ ಎಂಬ 23 ವರ್ಷದ ಯುವಕ ಹಾಗೂ 45 ವರ್ಷದ ದ್ರಾಕ್ಷಾಯಿಣಿ ಮತ್ತುತ್ತೂರು ಎಂಬ ಮಹಿಳೆ ಮೃತಪಟ್ಟಿದ್ದಾರೆ.
ಅನೂಪ ಕುಡತರಕರ್ ಕುಸಿತ ಕಟ್ಟಡ ಬಳಿ ಸೈಬರ್ ಕೆಪೆ ನಡೆಸುತ್ತಿದ್ದ. ದಾಕ್ಷಾಯಿಣಿ ಮುತ್ತೂರು ಕಟ್ಟಡದ ಕೆಳ ಮಹಡಿಯಲ್ಲಿ 5 ತಿಂಗಳಿಂದ ಹೊಟೆಲ್ ನಡೆಸುತ್ತಿದ್ದರು. ಗಂಡ ಹೊರಗೆ ಹೋದಾಗ ಕಟ್ಟಡ ಕುಸಿದು ಬಿದ್ದಿತ್ತು. ಕಟ್ಟಡದ ಅವಶೇಷಗಳ ಅಡಿಯಲ್ಲಿ ಒಟ್ಟು 61 ಜನರನ್ನು ರಕ್ಷಣೆ ಮಾಡಲಾಗಿದೆ.
ಆರೋಪಿಗಳು ಶರಣು:
ಕಟ್ಟಡದ ನಾಲ್ವರು ಪಾಲುದಾರರು ಪೊಲೀಸರ ಎದುರು ಶರಣಾಗಿದ್ದಾರೆ. ಕಟ್ಟಡ ವಿನ್ಯಾಸ ಮಾಡಿದ ಎಂಜಿನಿಯರ್ ವಿವೇಕ ಪವಾರ್ ಇನ್ನೂ ನಾಪತ್ತೆಯಾಗಿದ್ದಾರೆ.
ಎಸ್ಡಿಆರ್ಎಫ್ ಮತ್ತು 140 ಎನ್ಡಿಆರ್ಎಫ್ ಸಿಬ್ಬಂದಿ, 250 ಮಂದಿ ಅಗ್ನಿಶಾಮಕ ಸಿಬ್ಬಂದಿ, 3 ಸಾವಿರಕ್ಕೂ ಹೆಚ್ಚು ಪೊಲೀಸರು, 200 ಸ್ವಯಂ ಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. 12 ಜೆಸಿಬಿಗಳಿಂದ ಕಟ್ಟಡ ಅವಶೇಷ ತೆರವು ಕಾರ್ಯ ನಡೆಸಲಾಗುತ್ತಿದೆ. ಬೋಡ್ರಸ್ ಡಿಗ್ಗಿಂಗ್ ವಾಹನಗಳಿಂದ ಭರದ ಕಾರ್ಯಾಚರಣೆ ಸಾಗಿದೆ. 12 ಆ್ಯಂಬುಲೆನ್ಸ್, 50 ಮಂದಿ ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.