ಕುಟುಂಬ ರಾಜಕಾರಣದ ಅಂತ್ಯಕ್ಕೆ ಮತದಾರರು ಮುಂದಾಗಲಿದ್ದಾರೆ-ಸಂಸದೆ ಶೋಭಾ ಕರಂದ್ಲಾಜೆ

ಬೇಲೂರು, ಮಾ.20- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕುಟುಂಬ ರಾಜಕಾರಣದ ಅಂತ್ಯಕ್ಕೆ ಮತದಾರರು ಮುಂದಾಗಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಜೆಡಿಎಸ್ ಪಕ್ಷವು ಜಾತ್ಯತೀತ ಸಿದ್ಧಾಂತವನ್ನು ನೆಪಮಾತ್ರಕ್ಕೆ ಮಾತ್ರ ಹೇಳುತ್ತದೆ.ಆದರೆ, ಆ ಪಕ್ಷದಲ್ಲಿ ಸ್ವಜನಪಕ್ಷಪಾತ ಹಾಗೂ ಸ್ವಾರ್ಥದಿಂದ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಹಾಗಾಗಿ ಜೆಡಿಎಸ್ ಪಕ್ಷದ ಬಹುತೇಕ ಮುಖಂಡರು ಕುಟುಂಬ ರಾಜಕಾರಣವನ್ನು ನಿರ್ಮೂಲನೆ ಮಾಡಲು ತೆರೆ-ಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಭದ್ರಕೋಟೆಯನ್ನು ಛಿದ್ರಗೊಳಿಸುವ ಮೂಲಕ ಹಾಸನದಲ್ಲಿ ಕಮಲ ಅರಳಲು ಮುಂದಾಗಬೇಕು ಎಂದ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿದೆ.

ಇನ್ನು ಎರಡು ದಿನಗಳಲ್ಲಿ ರಾಜ್ಯದ 28 ಸ್ಥಾನಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ.ಅಲ್ಲದೆ, ನರೇಂದ್ರಮೋದಿಯವರು ಮಾಡಿದ ಸಾಧನೆ ಅತ್ಯುತ್ತಮವಾಗಿದೆ. ವಿಶೇಷವಾಗಿ ದೇಶಕ್ಕೆ ಅಭದ್ರತೆ ಬಂದ ಸಂದರ್ಭ ಅವರು ರಕ್ಷಣಾ ವ್ಯವಸ್ಥೆಯಲ್ಲಿ ತೆಗೆದುಕೊಂಡ ನಿರ್ಧಾರದಿಂದ ದೇಶದ ಜನರು ಪುನಃ ಮೋದಿ ದೇಶದ ಪ್ರಧಾನಿಯಾಗಬೇಕು ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಪ್ರಧಾನಿ ಮೋದಿಯವರು ಮಹಿಳೆಯರಿಗೆ ನೀಡಿದ ಉಚಿತ ಗ್ಯಾಸ್ ಸೌಲಭ್ಯ, ರೈತರಿಗೆ ಸನ್ಮಾನ್ ಯೋಜನೆ, ಜನಧನ್ ಸೇರಿದಂತೆ ಹಲವಾರು ಯೋಜನೆಗಳು ಈಗಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನವನ್ನು ಗಳಿಸಲು ಸಾಧ್ಯವಾಗಲಿದೆ ಎಂದರು.

ರಾಜ್ಯ ಬಿಜೆಪಿ ರೈತ ಮೋರ್ಚ ಕಾರ್ಯದರ್ಶಿ ರೇಣುಕುಮಾರ್, ಬಿಜೆಪಿ ಮುಖಂಡರಾದ ಪರ್ವತಯ್ಯ, ರಾಜು, ರಾಜಣ್ಣ, ಜುಂಜಯ್ಯ, ಮಲ್ಲಿಕಾರ್ಜನ್, ಮಧು ಇನ್ನಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ