ರಸ್ತೆ ಒತ್ತುವರಿ ಮಾಡಿಕೊಂಡು ವಾಣಿಜ್ಯ ಕಟ್ಟಡ ನಿರ್ಮಾಣ-ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಎಸ್.ಧನಂಜಯ ನೇತೃತ್ವದಲ್ಲಿ ಪ್ರತಿಭಟನೆ

ಕೆಆರ್ ಪೇಟೆ, ಮಾ.20- ಪಟ್ಟಣದ ಬಸವೇಶ್ವರ ನಗರದಲ್ಲಿರುವ ತಾಲೂಕು ವೀರಶೈವ ಮಹಾಸಭಾದ ನಿವೇಶನಕ್ಕೆ ಹೋಗಲು ಇದ್ದ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಯತ್ನಿಸುತ್ತಿರುವುದನ್ನು ಖಂಡಿಸಿ ಹಾಗೂ ಈ ಜಾಗದಲ್ಲಿ ಕಟ್ಟಡ ಕಟ್ಟಲು ಪರವಾನಗಿ ನೀಡಿರುವ ಪುರಸಭೆ ಮುಖ್ಯಾಧಿಕಾರಿಗಳ ಕ್ರಮ ಖಂಡಿಸಿ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಎಸ್.ಧನಂಜಯ ಅವರ ನೇತೃತ್ವದಲ್ಲಿ ಮುಖಂಡರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನು ನಡೆಸಿದರು.

ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ವಾಣಿಜ್ಯ ಸಮುಚ್ಛಯ ನಿರ್ಮಾಣ ಮಾಡುತ್ತಿರುವ ಎಂ.ಎನ್.ಅಶ್ವತ್ ಅವರ ಕ್ರಮ ಖಂಡಿಸಿ ಈಗಾಗಲೇ ವೀರಶೈವ ಮಹಾಸಭಾದ ಕಾರ್ಯಕರ್ತರು ಮತ್ತು ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ವೀರಶೈವ ಮಹಾಸಭಾ ವತಿಯಿಂದ ತಕರಾರು ಅರ್ಜಿಯನ್ನು ನೀಡಿದ್ದರೂ ಪರಿಗಣಿಸದೆ ಹಾಗೂ ಮಹಾಸಭಾ ಅಧ್ಯಕ್ಷನಾದ ನನ್ನ ಗಮನಕ್ಕೆ ತರದೆ ಲೈಸೆನ್ಸ್ ನೀಡಿ ಪುರಸಭಾ ನಿಯಮಾವಳಿಯನ್ನು ಉಲ್ಲಂಘಿಸಿದ್ದಾರೆ.

ಹಾಗಾಗಿ ಜಿಲ್ಲಾಧಿಕಾರಿಗಳು ಮುಖ್ಯಾಧಿಕಾರಿ ಮೂರ್ತಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕು ಹಾಗೂ ಅಶ್ವತ್ ಅವರ ಕಟ್ಟಡ ಪರವಾನಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಎಸ್.ಧನಂಜಯ ಮಾತನಾಡಿ, ರಸ್ತೆಗೆ ನಕ್ಷೆಯಲ್ಲಿ ಬಿಟ್ಟಿರುವ ಸೂಕ್ತ ಜಾಗ ಬಿಟ್ಟು ನಂತರವಷ್ಟೇ ವಾಣಿಜ್ಯ ಸಮುಚ್ಛಯ ನಿರ್ಮಾಣ ಮಾಡಲು ಅವಕಾಶ ನೀಡಬೇಕು. ಈ ಕೂಡಲೇ ಪುರಸಭೆಯು ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನೀಡಿರುವ ಲೈಸೆನ್ಸ್ ರದ್ದುಪಡಿಸಿ ಅಶ್ವತ್ಥ್ ಅವರೊಂದಿಗೆ ಜಂಟಿ ಅಳತೆ ಕಾರ್ಯ ನಡೆಸಿ, ರಸ್ತೆಯ ನಿರ್ಮಾಣ ಕೆಲಸಕ್ಕೆ ಮನವೊಲಿಸಿದ ನಂತರವಷ್ಟೇ ವಾಣಿಜ್ಯ ಸನುಚ್ಛಯ ಕಾಮಗಾರಿಗೆ ಅನುಮತಿ ನೀಡಬೇಕು ಎಂದು ಹೇಳಿದರು.

ಲೈಸೆನ್ಸ್ ರದ್ದು ಭರವಸೆ: ತಾಲೂಕು ವೀರಶೈವ ಮಹಾಸಭಾದ ಸಭಾಭವನ ನಿರ್ಮಿಸಲು ನಿಗದಿಯಾಗಿರುವ ನಿವೇಶನವು ಸಂಕರ್ಪ ರಸ್ತೆಗೆ ತೊಂದರೆಯಾಗುವುದನ್ನು ತಪ್ಪಿಸಲು ರಸ್ತೆಗೆ ಅವಶ್ಯಕವಿರುವಷ್ಟು ಜಾಗವನ್ನು ಕಾನೂನಿನ ಪರಿಮಿತಿಯೊಳಗೆ ಬಿಡಿಸಿಕೊಡಲಾಗುವುದಲ್ಲದೆ ಪ್ರಸ್ತುತ ನೀಡಿರುವ ಲೈಸೆನ್ಸ್ ಅಮಾನತಿನಲ್ಲಿಡಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಮೂರ್ತಿ ಅವರು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ವಾಪಸ್ ಪಡೆದರು.

ಚೋಕನಹಳ್ಳಿ ಪ್ರಕಾಶ್, ಬೂಕಹಳ್ಳಿ ಶಿವಪ್ಪ, ಗುಬ್ಬಳ್ಳಿ ನಂಜುಂಡಪ್ಪ, ವಡ್ಡರಹಳ್ಳಿ ಕುಮಾರ್, ಬೂಕಹಳ್ಳಿ ಗುರುಪಾದಸ್ವಾಮಿ, ಪ್ರಭಾಕರ್, ಸುರೇಶ್, ನವೀನ್, ನಂದೀಶ್, ಪಟೇಲ್ ಶಿವಕುಮಾರ್, ಚೌಡಸಮುದ್ರ ಕುಮಾರ್, ದೊಡ್ಡಯಾಚೇನಹಳ್ಳಿ ಕುಮಾರ್, ಅಪ್ಪನಹಳ್ಳಿ ನವೀನ್, ಮೋದೂರು ಶಿವಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ