ಬೆಂಗಳೂರು,ಮಾ.20-ಚುನಾವಣೆಗೂ ಮುನ್ನವೇ ರಾಷ್ಟ್ರದ ಗಮನಸೆಳೆದು ಹೈವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಮಂಡ್ಯ ಜಿಲ್ಲೆಯಿಂದಲೇ ರೆಬೆಲ್ಸ್ಟಾರ್ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತ ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಶಕ್ತಿ ಪ್ರದರ್ಶಿಸಿದ್ದಾರೆ.
ಸಾವಿರಾರು ಸಂಖ್ಯೆಯ ಅಂಬರೀಶ್ ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು, ವಿವಿಧ ಪಕ್ಷಗಳ ರಾಜಕೀಯ ಮುಖಂಡರ ಹರ್ಷೋದ್ಘಾರ, ಜೈಕಾರದ ನಡುವೆ ಬೆಳಗ್ಗೆ 11.30ಕ್ಕೆ ಸರಿಯಾಗಿ ಮಂಡ್ಯ ಜಿಲ್ಲಾ ಕಚೇರಿಗೆ ಆಗಮಿಸಿ ಅವರು ನಾಮಪತ್ರ ಸಲ್ಲಿಸಿದರು.
ನಾಮಪತ್ರದಲ್ಲಿ ಮುಸ್ಲಿಂ, ದಲಿತ, ಗಂಗಾಮತಸ್ಥ ಸಮುದಾಯಕ್ಕೆ ಸೇರಿದ ಮತದಾರರು ಸೂಚಕರಾಗಿ ಸಹಿ ಮಾಡಿದ್ದಾರೆ.
ಅಂಬರೀಶ್ ಪುತ್ರ ಅಭಿಷೇಕ್ ಗೌಡ, ಅಂಬರೀಶ್ ಅಣ್ಣನ ಪುತ್ರ ಸೇರಿದಂತೆ ಮತ್ತಿತರರ ಸಮ್ಮುಖದಲ್ಲಿ ತಮ್ಮ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಯಾಗಿರುವ ಎನ್.ಮಂಜುಶ್ರೀ ಅವರಿಗೆ ಸಲ್ಲಿಸುವ ಮೂಲಕ ಮಂಡ್ಯದಲ್ಲಿ ಅಧಿಕೃತವಾಗಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.
ಒಟ್ಟು ಮೂರು ಸೆಟ್ ನಾಮಪತ್ರ ಸಲ್ಲಿಸಿದ ಸುಮಲತಾ ಅವರಿಗೆ ಸೂಚಕರಾಗಿ ಅಂಬರೀಶ್ ಅವರ ಅಣ್ಣನ ಪುತ್ರ ಸೇರಿದಂತೆ ಸ್ಥಳೀಯರು ಸಹಿ ಹಾಕಿದ್ದಾರೆ.
ನಾಮಪತ್ರ ಸಲ್ಲಿಸುವ ವೇಳೆ ಸುಮಲತಾ ಅಂಬರೀಶ್ ಅವರನ್ನು ನೆನೆದು ಒಂದು ಕ್ಷಣ ಭಾವುಕರಾದರು.
ಶಕ್ತಿ ಪ್ರದರ್ಶಿಸಿದ ಸುಮಲತಾ :
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಎದುರು ಸುಮಲತಾ ಸ್ಪರ್ಧಿಸುತ್ತಿರುವುದರಿಂದ ಮಂಡ್ಯ ಜಿಲ್ಲೆಯಲ್ಲಿ ಅವರು ಇಂದು ಶಕ್ತಿಪ್ರದರ್ಶನ ನಡೆಸಿದರು.
ನಾಮಪತ್ರ ಸಲ್ಲಿಸಿದ ನಂತರ ಜಿಲ್ಲಾ ಕಚೇರಿಯಿಂದ ತೆರೆದ ವಾಹನದಲ್ಲಿ ಸಿಲ್ವರ್ ಜೂಬ್ಲಿ ಪಾರ್ಕ್ವರೆಗೂ ಮೆರವಣಿಗೆ ನಡೆಸಿ ತಮ್ಮನ್ನು ಕ್ಷೇತ್ರದಿಂದ ಆಯ್ಕೆ ಮಾಡುವಂತೆ ನೆರೆದಿದ್ದ ಸಮಸ್ತ ಅಭಿಮಾನಿಗಳಲ್ಲಿ ಮನವಿ ಮಾಡಿದರು.ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.ಕಂಸಾಳೆ, ಡೊಳ್ಳು ಕುಣಿತ ಎಲ್ಲರ ಗಮನೆಸೆಳೆದಿತ್ತು.
ಗಮನಸೆಳೆದ ಮಂಡ್ಯದ ಗಂಡು.. ಹಾಡು:
ಇಂದು ಬೆಳಗ್ಗಿನಿಂದಲೇ ಮಂಡ್ಯದೆಲ್ಲೆಡೆ ಅಂಬರೀಶ್ ನಟನೆಯ ಸಿನಿಮಾ ಹಾಡುಗಳಾದ ಮಂಡ್ಯದ ಗಂಡು… ಮುತ್ತಿನ ಚೆಂಡು, ಕುಚುಕು ಕುಚುಕು… ಗೀತೆಗಳು ರ್ಯಾಲಿಯುದ್ದಕ್ಕೂ ಮಾರ್ಧನಿಸಿದವು.
ಎಲ್ಲೆಲ್ಲೂ ಅಂಬರೀಶ್ ಅವರ ಭಾವಚಿತ್ರಗಳನ್ನುಹಿಡಿದುಕೊಂಡಿದ್ದ ಅಭಿಮಾನಿಗಳು ಮಂಡ್ಯದ ಗಂಡು ಅಂಬಿರೀಶಣ್ಣಗೆ ಜೈ, ಸುಮಕ್ಕನಿಗೆ ಜೈ ಎಂದು ಜೈಕಾರದ ಘೋಷಣೆಗಳನ್ನು ಕೂಗುವ ಮೂಲಕ ಬೆಂಬಲ ಸೂಚಿಸಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ರೋಡ್ ಶೋನಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಭಾರೀ ಸಂಖ್ಯೆಯ ಅಭಿಮಾನಿಗಳ ದಂಡೇ ಹರಿದುಬಂದಿತ್ತು.
ಮದ್ದೂರಿನಿಂದ ಸ್ವಾಭಿಮಾನಿ ಬಳಗದ ವತಿಯಿಂದ ಒಂದು ಸಾವಿರ ಯುವಕರು ಬೈಕ್ ರ್ಯಾಲಿ ನಡೆಸಿದರು. ಇತ್ತ ಶ್ರೀರಂಗಪಟ್ಟಣ, ಮಳವಳ್ಳಿ, ನಾಗಮಂಗಲ, ಮೇಲುಕೋಟೆ, ಕೆ.ಆರ್.ನಗರ, ಕೆ.ಆರ್.ಪೇಟೆ, ಮದ್ದೂರು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಸ್ವಯಂಪ್ರೇರಿತರಾಗಿ ಅಭಿಮಾನಿಗಳು ಆಗಮಿಸಿದ್ದರು.
ಮೆರವಣಿಗೆ ನಂತರ ಸಿಲ್ವರ್ಜ್ಯೂಬ್ಲಿ ಪಾರ್ಕ್ನಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಸುಮಲತಾ ಹಾರ ಹಾಕಿ ನಮಿಸಿದರು.
ರೋಡ್ಶೋನಿಂದ ಇಡೀ ಮಂಡ್ಯ ಇಂದು ಅಂಬರೀಶ್ಮಯವಾಗಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಇನ್ನು ಮೆರವಣಿಗೆಯಲ್ಲಿ ಚಿತ್ರನಟರಾದ ದರ್ಶನ್, ಯಶ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ, ಅಂಬರೀಶ್ ಪುತ್ರ ಅಭಿಷೇಕ್ ಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರಿಂದ ನೆಚ್ಚಿನ ನಟರನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ನಾಮಪತ್ರ ಸಲ್ಲಿಸುವ ಮುನ್ನ ಸುಮಲತಾ ಮೈಸೂರಿನಲ್ಲಿರುವ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.
ಇದೇ 25ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುತ್ತಿರುವುದರಿಂದ ಮಂಡ್ಯ ಕ್ಷೇತ್ರ ರಣರಂಗವಾಗುವುದರಲ್ಲಿ ಅನುಮಾನವಿಲ್ಲ.