ಬೆಂಗಳೂರು, ಮಾ.20-ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸದೆ ಇರುವುದರಿಂದ ಲೋಕಸಭೆಯ ಮಹಾಸಮರಕ್ಕೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ ಹಳೇ ಮೈಸೂರು ಭಾಗದ 14 ಜಿಲ್ಲೆಗಳಿಗೆ ಏಪ್ರಿಲ್ 18 ರಂದು ಮತದಾನ ನಡೆಯಲಿದೆ. ಅದಕ್ಕೆ ನಿನ್ನೆ ಅಧಿಸೂಚನೆ ಜಾರಿಯಾಗಿದ್ದು, ನಾಮಪತ್ರ ಸಲ್ಲಿಸಲು ಇಂದು ಎರಡನೇ ದಿನ. ಆದರೆ ಈವರೆಗೂ ಬೆರಳೆಣಿಕೆಯಷ್ಟು ಅಭ್ಯರ್ಥಿಗಳು ಮಾತ್ರ ಅಲ್ಲಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅವರಲ್ಲಿ ಬಹುತೇಕರು ಪಕ್ಷೇತರರಿದ್ದಾರೆ.
ಮಹಾಸಮರದ ಚುನಾವಣಾ ಕಣ ಬೇಸಿಗೆಯ ಬಿರುಬಿಸಿಲಿನಂತೆ ದಿನೇ ದಿನೇ ಕಾವೇರುತ್ತಿದೆ. ಆದರೆ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸದೆ ಇರುವುದು ಆಕಾಂಕ್ಷಿಗಳಲ್ಲಿ ಕಾತರ, ತಲ್ಲಣ, ದುಗುಡಗಳಿಗೆ ಕಾರಣವಾಗಿದೆ.
ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಕ್ರಮವಾಗಿ 20 ಮತ್ತು 8 ಕ್ಷೇತ್ರಗಳನ್ನು ಹಂಚಿಕೊಂಡಿವೆ. ಕಾಂಗ್ರೆಸ್ ತನ್ನ 10 ಮಂದಿ ಸಂಸದರ ಪೈಕಿ 9 ಮಂದಿಗೆ ಟಿಕೆಟ್ ನೀಡುವ ಖಾತ್ರಿ ನೀಡಿದೆ.
ತುಮಕೂರಿನ ಸಂಸದ ಮುದ್ದಹನುಮೇಗೌಡ ಟಿಕೆಟ್ ವಂಚಿತರಾಗಿದ್ದಾರೆ.ಉಳಿದ 11 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಈಗಾಗಲೇ 3 ಸುತ್ತಿನ ತಾಲೀಮು ನಡೆಸಿದೆ.ರಾಜ್ಯ ಚುನಾವಣಾ ಸಮಿತಿ ಸಭೆ, ಕೇಂದ್ರ ಸ್ಕ್ರೀನಿಂಗ್ ಕಮಿಟಿಯಲ್ಲಿ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಈ ಪಟ್ಟಿಗೆ ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿ ಅಂಕಿತ ಹಾಕಬೇಕಿದ್ದು, ಸಮಿತಿ ಸಭೆ ಮಾ.22ಕ್ಕೆ ನಿಗದಿಯಾಗಿದೆ. ಆವರೆಗೂ 11 ಕ್ಷೇತ್ರಗಳ ಆಕಾಂಕ್ಷಿಗಳಲ್ಲಿ ಆತಂಕ,ಗೊಂದಲಗಳು ಇದ್ದೇ ಇರುತ್ತವೆ. ಹಾಗಾಗಿ ಯಾರೂ ನಾಮಪತ್ರ ಸಲ್ಲಿಸಲು ಮುಂದೆ ಬರುತ್ತಿಲ್ಲ. ಇನ್ನು ಬಿಜೆಪಿ ನಿನ್ನೆ ನವದೆಹಲಿಯಲ್ಲಿ ರಾಜ್ಯ ನಾಯಕರ ಜೊತೆ ಮಹತ್ವದ ಸಭೆ ನಡೆಸಿದ್ದು, 28 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ.
ಇಬ್ಬರು ಸಂಸದರಿಗೆ ಟಿಕೆಟ್ ಅಂತಿಮಗೊಳಿಸದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿವೇಚನೆಗೆ ಬಿಡಲಾಗಿದೆ.
ತುಮಕೂರು, ಬಳ್ಳಾರಿ, ರಾಯಚೂರು, ಮಂಡ್ಯ ಕ್ಷೇತ್ರಗಳಲ್ಲಿ ಎದುರಾಳಿ ಪಕ್ಷಗಳು ತೆಗೆದುಕೊಳ್ಳುವ ನಿರ್ಧಾರವನ್ನು ಅವಲೋಕಿಸಿ ಅಭ್ಯರ್ಥಿಗಳ ಆಯ್ಕೆಯನ್ನು ಮಾಡುವ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಹೀಗಾಗಿ ಬಿಜೆಪಿಯ ಹುರಿಯಾಳುಗಳು ಕೂಡ ಇನ್ನು ಅಂತಿಮಗೊಂಡಿಲ್ಲ.
ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಒಂದೆರಡು ದಿನಗಳಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.ಜೆಡಿಎಸ್ ಈವರೆಗೂ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖೈರು ಗೊಳಿಸಿದೆ, ಆದರೆ ಅಧಿಕೃತವಾಗಿ ಪ್ರಕಟಿಸಿಲ್ಲ.ತನ್ನ ಪಾಲಿನ 8 ಕ್ಷೇತ್ರಗಳಿಗೂ ಒಂದೆರಡು ದಿನಗಳಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
ಬಿಎಸ್ಪಿ ಕೂಡ 28 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದೆಯಾದರೂ ಇನ್ನೂ ಪಟ್ಟಿ ಪ್ರಕಟಿಸಿಲ್ಲ. ಉಳಿದಂತೆ ಕಮ್ಯುನಿಷ್ಟ್ ಪಾರ್ಟಿ, ಎಸ್ಡಿಪಿಐ ಸೇರಿದಂತೆ ಇನ್ನಿತರ ಪಕ್ಷಗಳು ಆಯ್ದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ.
ನಾಮಪತ್ರ ಸಲ್ಲಿಕೆಗೆ ಇನ್ನು ಆರು ದಿನಗಳು ಮಾತ್ರ ಬಾಕಿ ಇದ್ದು, ಅದರಲ್ಲಿ ಗುರುವಾರ, ಶುಕ್ರವಾರ, ಸೋಮವಾರ ಮತ್ತು ಮಂಗಳವಾರ ಮಾತ್ರ ಬಾಕಿ ಉಳಿದಿವೆ. ತಿಂಗಳ ನಾಲ್ಕನೇ ಶನಿವಾರ ಮತ್ತು ಭಾನುವಾರ ಬ್ಯಾಂಕ್ಗಳ ರಜೆ ಇರುವುದರಿಂದ ನಾಮಪತ್ರ ಸ್ವೀಕಾರ ಇರುವುದಿಲ್ಲ ಎಂದು ಆಯೋಗ ಪ್ರಕಟಿಸಿದೆ.
ಬಹುತೇಕ ಮಂದಿ ಶುಕ್ರವಾರ ಮತ್ತು ಮಂಗಳವಾರ ನಾಮಪತ್ರ ಸಲ್ಲಿಸಲು ಹಿಂದೇಟು ಹಾಕುತ್ತಾರೆ.ಹೀಗಾಗಿ ನಾಳೆ ಮತ್ತು ಸೋಮವಾರ ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ಕೊನೇ ಕ್ಷಣದಲ್ಲಿ ಟಿಕೆಟ್ ಯಾರ ಪಾಲಾಗಲಿದೆ ಎಂಬ ಆತಂಕ ಒಂದು ಕಡೆಯಾದರೆ, ನಾಮಪತ್ರ ಸಲ್ಲಿಕೆಗೆ ದಾಖಲಾತಿಗಳನ್ನು ಹೊಂದಿಸಿಕೊಳ್ಳುವ ಪರದಾಟದಲ್ಲಿ ಆಕಾಂಕ್ಷಿಗಳು ಹೈರಾಣಾಗಿದ್ದಾರೆ.