ಇನ್ನೂ ಬಗೆಹರಿಯದ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಗೊಂದಲ

ಬೆಂಗಳೂರು, ಮಾ.20- ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ ಎರಡು ದಿನ ಕಳೆದರೂ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಗೊಂದಲ ಇನ್ನೂ ಬಗೆಹರಿದಿಲ್ಲ.

ಕಾಂಗ್ರೆಸ್‍ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ 8 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.ಈಗಾಗಲೇ ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮಾಡಿರುವ ಜೆಡಿಎಸ್ ವರಿಷ್ಠರು ಉಳಿದ ನಾಲ್ಕೂ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿಲ್ಲ. ಅಲ್ಲದೆ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆ ಬಗ್ಗೆ ಇದುವರೆಗೂ ಸ್ಪಷ್ಟ ನಿರ್ಧಾರ ಪ್ರಕಟವಾಗಿಲ್ಲ.

ಸ್ಪರ್ಧೆ ಮಾಡುವ ಬಗ್ಗೆ ಗೌಡರು ಗುಟ್ಟು ಬಿಟ್ಟುಕೊಡದೆ ಚುನಾವಣೆ ಸಿದ್ಧತೆ ಬಗ್ಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯ ಹುಡುಕಾಟ ಮುಂದುವರಿದಿದೆ.ಈ ಕ್ಷೇತ್ರಕ್ಕೆ ನ್ಯಾಯಮೂರ್ತಿ ಗೋಪಾಲಗೌಡ, ಎಚ್.ಡಿ.ದೇವೇಗೌಡರ ಹೆಸರು ಪ್ರಸ್ತಾಪವಾಗಿತ್ತಾದರೂ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ತುಮಕೂರು ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸ್ಥಳೀಯ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಸ್ಪರ್ಧೆ ಮಾಡುವಂತೆ ಗೌಡರ ಮೇಲೆ ಒತ್ತಡ ಹೇರುತ್ತಿದ್ದಾರೆ.ತುಮಕೂರಿನಿಂದ ಸ್ಪರ್ಧೆ ಮಾಡುವ ಬಗ್ಗೆ ಗೌಡರು ಯಾವುದೇ ನಿರ್ಧಾರವನ್ನು ಇದುವರೆಗೂ ಪ್ರಕಟಿಸಿಲ್ಲ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಜೆಡಿಎಸ್ ಅಭ್ಯರ್ಥಿ ಎಂದು ಪ್ರಸ್ತಾಪವಾಗುತ್ತಿದೆಯಾದರೂ ಪಕ್ಷ ಮಾತ್ರ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ರವಿ ಚೌಹಾಣ್ ಮತ್ತು ಸುನಿಲ್ ರಾಥೋಡ್ ಅವರ ಹೆಸರು ಪ್ರಸ್ತಾಪವಾಗುತ್ತಿದೆಯಾದರೂ ಅಭ್ಯರ್ಥಿ ಯಾರೆಂಬುದು ಇನ್ನೂ ಅಂತಿಮವಾಗಿಲ್ಲ.

ಆದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹಾಸನ ಕ್ಷೇತ್ರಕ್ಕೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ, ಮಂಡ್ಯ ಕ್ಷೇತ್ರಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಹಾಗೂ ಶಿವಮೊಗ್ಗ ಕ್ಷೇತ್ರಕ್ಕೆ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಹೆಸರು ಅಂತಿಮವಾಗಿದ್ದು, ಈಗಾಗಲೇ ಗೌಡರು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ