![manju](http://kannada.vartamitra.com/wp-content/uploads/2018/03/manju-1-507x381.jpg)
ಬೆಂಗಳೂರು, ಮಾ.20- ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಯಂತೆ ತಯಾರಾಗದ ಸ್ಯಾನಿಟರ್ ನ್ಯಾಪ್ಕಿನ್ ಇನ್ಸಿನಿರೇಟರ್ಗಳನ್ನು ಬಿಬಿಎಂಪಿ ಶಾಲಾ-ಕಾಲೇಜುಗಳ ಬಳಿ ಅಳವಡಿಸಲು ಅವಕಾಶ ನೀಡಬಾರದು ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿರುವ 156 ಶಾಲಾ-ಕಾಲೇಜುಗಳ ಪೈಕಿ 90 ಶಿಶುವಿಹಾರಗಳನ್ನು ಹೊರತುಪಡಿಸಿ ಇನ್ನುಳಿದ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನಿರೇಟರ್ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ.
ಇದರಂತೆ ಶಾಲಾ-ಕಾಲೇಜುಗಳ ಬಳಿ ಇನ್ಸಿನಿರೇಟರ್ಗಳನ್ನು ಅಳವಡಿಸಲು ಝೆಸ್ಟ್ ವೆಂಡ್ ಕಾನ್ ಸಂಸ್ಥೆ ಮುಂದೆ ಬಂದಿದೆ. ಆದರೆ ಆ ಸಂಸ್ಥೆಯ ಉತ್ಪನ್ನಗಳು ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಯಂತೆ ತಯಾರಾಗಿಲ್ಲ.
ಝೆಸ್ಟ್ ಸಂಸ್ಥೆ ಬಾಕ್ಸ್ ಹೀಟರ್ ಇನ್ಸಿನಿರೇಟರ್ಗಳನ್ನು ತಯಾರಿಸುತ್ತಿದ್ದು ಆ ಯಂತ್ರಗಳಿಂದ ಡಯಾಕ್ಸಿನ್, ಕಾರ್ಬನ್ ಮೋನಾಕ್ಸೈಡ್, ನೈಟ್ರೋಜನ್ ಮತ್ತು ಸಲ್ಫರ್ ಡಯಾಕ್ಸೈಡ್ ರಾಸಾಯನಿಕ ಉತ್ಪತ್ತಿಯಾಗುತ್ತಿವೆ.
ಡಯಾಕ್ಸಿನ್ ರಾಸಾಯನಿಕ ಮಾರಕ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ. ಇದರಿಂದ ವಿದ್ಯಾರ್ಥಿನಿಯರು ಸೇರಿದಂತೆ ಸುತ್ತಮುತ್ತಲ ಜನರಿಗೆ ರೋಗ ಹರಡುವ ಸಾಧ್ಯತೆ ಇರುವುದರಿಂದ ಝೆಸ್ಟ್ ಸಂಸ್ಥೆಯ ಇನ್ಸಿನಿರೇಟರ್ಗಳ ಅಳವಡಿಕೆಗೆ ಅವಕಾಶ ಮಾಡಿಕೊಡಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಇದರ ಬದಲಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳಿಗನುಗುಣವಾಗಿ ಇನ್ಸಿನಿರೇಟರ್ ತಯಾರಿಸುವ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಎನ್.ಆರ್.ರಮೇಶ್ ಸಲಹೆ ನೀಡಿದ್ದಾರೆ.