ಇನ್ನೂ ಚುರುಕುಗೊಳ್ಳದ ನಾಮಪತ್ರ ಸಲ್ಲಿಕೆ

ಬೆಂಗಳೂರು,ಮಾ.20-ಅಧಿಸೂಚನೆ ಪ್ರಕಟಗೊಂಡು ಎರಡು ದಿನವಾದರೂ ಬೆಂಗಳೂರು ನಗರ ಹಾಗೂ ಅಕ್ಕಪಕ್ಕ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಚುರುಕುಗೊಂಡಿಲ್ಲ.

ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ನಿನ್ನೆ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.ಇಂದು ಇನ್ನಿಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಉಳಿದಂತೆ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ನಾಮಪತ್ರ ಸಲ್ಲಿಕೆ ಚುರುಕುಗೊಂಡಿಲ್ಲ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಜೆಡಿಎಸ್ ಕೂಡ ಅಭ್ಯರ್ಥಿಗಳನ್ನು ಆಖೈರುಗೊಳಿಸದಿರುವುದರಿಂದ ನಾಮಪತ್ರ ಸಲ್ಲಿಕೆ ಬಿರುಸುಗೊಂಡಿಲ್ಲ. ನಿನ್ನೆ ಮಂಗಳವಾರವಾಗಿದ್ದರಿಂದ ಬಹಳಷ್ಟು ಮಂದಿ ನಾಮಪತ್ರ ಸಲ್ಲಿಸಲು ಹಿಂದೇಟು ಹಾಕಿದರು.

ಇಂದು ಜಿಲ್ಲಾ ಚುನಾವಣಾ ಕಚೇರಿಗೆ ಬಂದಿರುವ ಸಾಕಷ್ಟು ಮಂದಿ ನಾಮಪತ್ರ ಸಲ್ಲಿಕೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.ಮಾ.26 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು ಇನ್ನು ಆರು ದಿನ ಬಾಕಿಯಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇನ್ನೆರಡು ದಿನದಲ್ಲಿ ಬಿಡುಗಡೆಯಾಗಲಿದ್ದು, ಬಿಜೆಪಿ ಈಗಾಗಲೆ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದು ಯಾವುದೇ ಕ್ಷಣದಲ್ಲಾರೂ ಪ್ರಕಟಿಸಬಹುದು. ಜೆಡಿಎಸ್ ಕೂಡ ಹುರಿಯಾಳುಗಳು ಸಿದ್ಧವಾಗಿ ಇಟ್ಟುಕೊಂಡಿದೆ. ಬಿಎಸ್‍ಪಿ ಈ ಬಾರಿ 28ಲೋಕಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದು 4ಪ್ರಮುಖ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿದ ಬಳಿಕ ಚುನಾವಣಾ ಕಣ ರಂಗೇರುವ ಸಾಧ್ಯತೆಯಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ