ಬೆಂಗಳೂರು, ಮಾ.20- ರಾಜ್ಯ ಭ್ರಷ್ಟಾಚಾರ ನಿಗ್ರಹ ದಳವು ನಿನ್ನೆ ಏಕಕಾಲದಲ್ಲಿ ದಾಳಿ ಮಾಡಿ ನಾಲ್ವರು ವಿವಿಧ ಸರ್ಕಾರಿ ನೌಕರರ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಚರ ಹಾಗೂ ಸ್ಥಿರ ಆಸ್ತಿಗಳ ವಿವರ ನೀಡಿದೆ.
ಅಲಿ ಅಸ್ಕರ್ ರಸ್ತೆಯಲ್ಲಿನ ಸಹಕಾರ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸಹಕಾರ ಸಂಘಗಳ ಅಪರ ನಿಬಂಧಕರಾಗಿರುವ ಸತೀಶ್ ಅವರು ತಮ್ಮ ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ಒಂದು ಮನೆ, ಎರಡು ನಿವೇಶನ, ಒಂದು ಕೆಜಿ ಚಿನ್ನ, 20 ಕೆಜಿ 900 ಗ್ರಾಂ ಬೆಳ್ಳಿ, ಒಂದು ಕಾರು, ಬೈಕ್, ಬ್ಯಾಂಕ್ ಉಳಿತಾಯ ಖಾತೆಯಲ್ಲಿ 3.84 ಲಕ್ಷ ಮತ್ತು 34.16 ಲಕ್ಷ ಗೃಹೋಪಯೋಗಿ ವಸ್ತುಗಳು ಹಾಗೂ ಇನ್ನೂ ಪರಿಶೀಲಿಸಬೇಕಾಗಿರುವ ಒಂದು ಲಾಕರ್ ಪತ್ತೆಯಾಗಿದೆ.
ವಿಜಯಪುರದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಉಪ ನಿರ್ದೇಶಕ ಶರದ್ ಗಂಗಪ್ಪ ಇಜ್ರಿ ಅವರು ತಮ್ಮ ಮತ್ತು ಕುಟುಂಬದ ಹೆಸರಿನಲ್ಲಿ ಎರಡು ಮನೆ, ಒಂದು ಫ್ಲಾಟ್, ವಿವಿಧ ಸರ್ವೆ ನಂಬರ್‍ಗಳಲ್ಲಿ 32 ಎಕರೆ 24 ಗುಂಟೆ ಕೃಷಿ ಜಮೀನು, 675 ಗ್ರಾಂ ಚಿನ್ನ, 12.5 ಕೆಜಿ ಬೆಳ್ಳಿ, ಮೂರು ಕಾರು, ಮೂರು ಬೈಕ್, 42.66ಲಕ್ಷ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿ 3.97 ಲಕ್ಷ, 2.6ಲಕ್ಷ ಠೇವಣಿಗಳು ಹಾಗೂ 6.37 ಲಕ್ಷ ಮೊತ್ತದ ವಿಮೆ ಪಾಲಿಸಿಗಳು ಮತ್ತು ಒಂದು ಲಾಕರ್ ಕಂಡುಬಂದಿದೆ.
ಗದಗ ಜಿಲ್ಲೆಯ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿರುವ ಪ್ರಕಾಶ್‍ಗೌಡ ಕುದರಿಮೋಟಿ ಅವರು ತಮ್ಮ ಹೆಸರಿನಲ್ಲಿ ಮುಂಡರಗಿಯಲ್ಲಿ ಎರಡು ಮನೆ, ಮೂರು ನಿವೇಶನ, ಕುಕ್ಕನೂರಿನಲ್ಲಿ ಐದು ಎಕರೆ ಮತ್ತು ಹರಳಾಪುರದಲ್ಲಿ 4.29 ಎಕರೆ, ಹಳ್ಳಿಗುಡ್ಡಿ ಗ್ರಾಮದಲ್ಲಿ 7.31 ಎಕರೆ ಕೃಷಿ ಜಮೀನು, 570 ಗ್ರಾಂ ಚಿನ್ನ, 2 ಕೆಜಿ 290 ಗ್ರಾಂ ಬೆಳ್ಳಿ, ಒಂದು ಕಾರು, ಎರಡು ದ್ವಿಚಕ್ರ ವಾಹನ ಹೊಂದಿದ್ದಾರೆ.
ಬಿಬಿಎಂಪಿ ಜೆಬಿ ನಗರ ಉಪವಿಭಾಗದ ಸಹಾಯಕ ಕಂದಾಯಾಧಿಕಾರಿ ಮಂಜುನಾಥ್ ಅವರು ತಮ್ಮ ಮತ್ತು ಕುಟುಂಬದ ಹೆಸರಿನಲ್ಲಿ ಎರಡು ಮನೆ, ನಾಲ್ಕು ನಿವೇಶನ, ಚನ್ನರಾಯಪಟ್ಟಣದ ಬಿಎಂ ರಸ್ತೆಯಲ್ಲಿ ಒಂದು ಮನೆಯೊಂದಿಗೆ ವಾಣಿಜ್ಯ ಸಂಕೀರ್ಣ, ಹಾಸನದಲ್ಲಿ 13 ಗುಂಟೆ ಜಮೀನು, 453ಗ್ರಾಂ ಚಿನ್ನ, 1 ಕೆಜಿ 230ಗ್ರಾಂ ಬೆಳ್ಳಿ, ಒಂದು ಕಾರು, ಬೈಕ್, 4.26 ಲಕ್ಷ ನಗದು, 19 ಲಕ್ಷ ಬೆಲೆಯ ಗೃಹೋಪಯೋಗಿ ವಸ್ತುಗಳು, ಎರಡು ಲಾಕರ್‍ಗಳು ಪತ್ತೆಯಾಗಿವೆ.
ಈ ನಾಲ್ವರು ಸರ್ಕಾರಿ ನೌಕರರು ಹೊಂದಿರುವ ಆಸ್ತಿಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ಈಗಾಗಲೇ ದೊರೆತಿರುವ ದಾಖಲೆಗಳ ಪರಿಶೀಲನಾ ಕಾರ್ಯ, ಸಂಬಂಧಪಟ್ಟ ಇನ್ನೂ ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆಯನ್ನು ಎಸಿಬಿ ಮುಂದುವರಿಸಿದೆ.