ಬೆಂಗಳೂರು, ಮಾ.19- ಕಲಬುರ್ಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಉಮೇಶ್ ಜಾಧವ್ ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಬಿಜೆಪಿ ಪರ್ಯಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.
ಒಂದು ವೇಳೆ ನಾಮಪತ್ರ ಸಲ್ಲಿಸುವ ದಿನಾಂಕದೊಳಗೆ ಉಮೇಶ್ ಜಾಧವ್ ರಾಜೀನಾಮೆಯನ್ನು ಸ್ಪೀಕರ್ ರಮೇಶ್ಕುಮಾರ್ ಅಂಗೀಕಾರ ಮಾಡದಿದ್ದರೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.
ಇದೇ 27ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಕೆಲವು ಕಾರಣಗಳನ್ನು ನೀಡಿ ಸ್ಪೀಕರ್ ಜಾಧವ್ ಅವರ ರಾಜೀನಾಮೆಯನ್ನು ಅಂಗಿಕಾರ ಮಾಡಿಲ್ಲ. ಇದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.
ನಾಮಪತ್ರ ಸಲ್ಲಿಸಿದ ಬಳಿಕ ಜಾಧವ್ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿದರೆ ಅವರ ನಾಮಪತ್ರವೇ ತಿರಸ್ಕøತವಾಗುತ್ತದೆ. ಹೀಗೆ ಎಚ್ಚರಿಕೆ ಹೆಜ್ಜೆ ಇಟ್ಟಿರುವ ಬಿಜೆಪಿ ನಾಯಕರು ರತ್ನಪ್ರಭಾ ಅವರಿಗೆ ಸ್ಪರ್ಧಿಸಲು ಮಾನಸಿಕವಾಗಿ ಸಜ್ಜಾಗುವಂತೆ ಬಿಜೆಪಿಯಿಂದ ಸೂಚನೆ ಹೋಗಿದೆ ಎನ್ನಲಾಗಿದೆ.
ಈ ಹಿಂದೆ ರತ್ನಪ್ರಭಾ ಅವರು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದರು. ಇದಕ್ಕೂ ಮುನ್ನ ಕಲಬುರ್ಗಿಯಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಇವರನ್ನೇ ಕಣಕ್ಕಿಳಿಸಲು ಲೆಕ್ಕ ಹಾಕಿತ್ತು. ಆದರೆ, ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆಗೆ ಪ್ರಬಲ ಸ್ಪರ್ಧೆ ಒಡ್ಡಲು ಸೂಕ್ತವಲ್ಲ ಎಂಬ ಕಾರಣಕ್ಕಾಗಿ ಆಪರೇಷನ್ ಕಮಲದ ಮೂಲಕ ಉಮೇಶ್ ಜಾಧವ್ಗೆ ಗಾಳ ಹಾಕಿದೆ.
ಶಾಸಕ ಸ್ಥಾನಕ್ಕೆ ಜಾಧವ್ ರಾಜೀನಾಮೆ ನೀಡಿ ಹಲವು ದಿನಗಳಾಗಿದ್ದರೂ ರಮೇಶ್ ಕುಮಾರ್ ಕೆಲವು ತಾಂತ್ರಿಕ ಕಾರಣಗಳನ್ನು ನೀಡಿ ಅಂಗೀಕಾರ ಮಾಡುತ್ತಿಲ್ಲ. ಇದರ ಜತೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಅವರ ಸದಸ್ಯತ್ವವನ್ನು ಅನರ್ಹ ಮಾಡಬೇಕೆಂದು ಕಾಂಗ್ರೆಸ್ ದೂರು ಕೊಟ್ಟಿದೆ.
ಇದನ್ನೇ ಅಸ್ತ್ರ ಮಾಡಿಕೊಂಡಿರುವ ಸ್ಪೀಕರ್, ಅನರ್ಹಗೊಳಿಸಿದರೆ ಮುಖಭಂಗಕ್ಕೆ ಒಳಗಾಗಬೇಕಾಗುತ್ತದೆ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಜ್ಜಾಗಿದೆ.
ಈ ಹಿಂದೆ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದಲೇ ಹಿಂದೆ ಸರಿದಿದ್ದರಿಂದ ಬಿಜೆಪಿ ಭಾರೀ ಮುಖಭಂಗ ಅನುಭವಿಸಿತ್ತು.
ಈಗ ಒಂದೊಂದು ಕ್ಷೇತ್ರಗಳಿಗೂ ಸಾಕಷ್ಟು ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಜಾಧವ್ ರಾಜೀನಾಮೆ ಅಂಗೀಕಾರವಾಗದಿದ್ದರೆ ರತ್ನಪ್ರಭ ಸ್ಪರ್ಧಿಸುವುದು ಖಚಿತ ಎಂದು ಪಕ್ಷದ ಮೂಲಗಳು ತಿಳಿಸಿವೆ.