ಯಾವುದೇ ಪಕ್ಷಗಳಲ್ಲಿ ಇನ್ನೂ ಟಿಕೆಟ್ ಹಂಚಿಕೆ ಅಂತಿಮಗೊಂಡಿಲ್ಲ

ಬೆಂಗಳೂರು,ಮಾ.19- ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಅಂತಿಮಗೊಂಡಿಲ್ಲ. ಆದರೂ ಚುನಾವಣಾ ಕಣ ರಂಗೇರಿದೆ.

ಸಂಭಾವ್ಯ ಅಭ್ಯರ್ಥಿಗಳ ಪರ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಯತೊಡಗಿದೆ. ರಣ ರಣ ಬಿಸಿಲಿನ ನಡುವೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ತಮ್ಮ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ.

ಅಭ್ಯರ್ಥಿಗಳು ಯಾರೇ ಆಗಲಿ ನಮಗೆ ನಮ್ಮ ಪಕ್ಷ ಮುಖ್ಯ ಎಂಬ ಹಿನ್ನೆಲೆಯಲ್ಲಿ ಹಲವರು ಈಗಾಗಲೇ ಅಖಾಡಕ್ಕಿಳಿದು ಪ್ರಚಾರ ಕಣದಲ್ಲಿದ್ದಾರೆ. ಗಲ್ಲಿ ಗಲ್ಲಿಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಚುನಾವಣೆಯದ್ದೇ ಮಾತು ಕೇಳಿಬರುತ್ತಿದೆ.

ಮೊದಲ ಹಂತದ ಚುನಾವಣೆ ನಡೆಯುವ ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ 14 ಕ್ಷೇತ್ರಗಳಲ್ಲಿ ಚುನಾವಣಾ ಕಾವು ರಂಗೇರಿದೆ.

ಮಂಡ್ಯ ಮತ್ತು ಹಾಸನದ ಚುನಾವಣೆ ದೇಶದ ಗಮನ ಸೆಳೆದಿದೆ. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಕ್ಕಳಾದ ಪ್ರಜ್ಞಲ್ ಮತ್ತು ನಿಖಿಲ್ ಇಲ್ಲಿ ಮೈತ್ರಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದು, ಹಾಸನದಲ್ಲಿ ಪ್ರಜ್ವಲ್ ವಿರುದ್ಧ ಎ. ಮಂಜು ಬಿಜೆಪಿಯಿಂದ ಅಭ್ಯರ್ಥಿಯಾಗಲಿದ್ದಾರೆ.

ಅದೇ ರೀತಿ ಮಂಡ್ಯದಲ್ಲಿ ದಿ. ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.

ದೇವೇಗೌಡರು ಇನ್ನೂ ಯಾವ ಕ್ಷೇತ್ರದಿಂದ ಕಣಕ್ಕಿಳಿಯಬೇಕೆನ್ನುವುದು ನಿರ್ಧಾರವಾಗಿಲ್ಲ. ತುಮಕೂರು ಅಥವಾ ಬೆಂಗಳೂರು ಉತ್ತರದಿಂದ ಕಣಕ್ಕಿಳಿಯಲು ಅವರನ್ನು ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳವರು ಆಹ್ವಾನಿಸಿದ್ದಾರೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳ ಪ್ರಚಾರ ಜೋರಾಗಿಯೇ ನಡೆದಿದೆ. ಇಂದು ಅಥವಾ ನಾಳೆ ಕಾಂಗ್ರೆಸ್ ಬಿಜೆಪಿಯ ಪಟ್ಟಿ ಅಂತಿಮಗೊಳ್ಳಬಹುದು.

ಬಹುತೇಕ ಜೆಡಿಎಸ್‍ನ ಅಭ್ಯರ್ಥಿಗಳ ಆಯ್ಕೆಯೂ ಅಂತಿಮವಾಗಬಹುದು. ನಂತರ ಚುನಾವಣಾ ಕಣ ಮತ್ತಷ್ಟು ಜೋರಾಗಲಿದೆ.

ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅವರು, ನಾಳೆ ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಅದೇ ರೀತಿ ಜೆಡಿಎಸ್‍ನ ನಿಖಿಲ್ ಕೂಡ ಭಾರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ. ಇತ್ತ ಹಾಸನದಲ್ಲಿ ಪ್ರಜ್ವಲ್ ಗೆಲುವಿಗೆ ಮಾಜಿ ಪ್ರಧಾನಿ ದೇವೇಗೌಡರು, ಸಚಿವ ರೇವಣ್ಣ ಪಣತೊಟ್ಟು ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ.

ಇಂದು ಪುಟ್ಟೇಗೌಡ, ಬಿ.ಶಿವರಾಂ ಅವರನ್ನು ಭೇಟಿ ಮಾತುಕತೆ ನಡೆಸಿದ್ದಾರೆ. ಕೋಲಾರದಲ್ಲಿ ಮುನಿಯಪ್ಪ ವಿರುದ್ಧ ಮುನಿಸಿಕೊಂಡಿರುವ ಕಾಂಗ್ರೆಸ್ ನಾಯಕರ ಮನವೊಲಿಸುವ ಪ್ರಯತ್ನ ನಡೆಸಲಾಗಿದೆ.

ಅತ್ತ ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್, ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಪ್ರಚಾರಕ್ಕೆ ಹೋಗುವ ಪ್ರಯತ್ನ ಮುಂದುವರೆಸಲಾಗಿದೆ. ತುಮಕೂರಿನಲ್ಲಿ ಇನ್ನೂ ಹಗ್ಗ ಜಗ್ಗಾಟ ಮುಂದುವರೆದಿದೆ.

ಬಿಜೆಪಿಯಲ್ಲಿ 22 ಸ್ಥಾನಗಳಿಗೆ ಇಂದು ಸಂಜೆ ಪಟ್ಟಿ ಫೈನಲ್ ಆಗಲಿದ್ದು, ಬೃಹತ್ ರ್ಯಾಲಿ ಹಾಗೂ ಸಮಾವೇಶಗಳನ್ನು ಹಮ್ಮಿಕೊಳ್ಳುವ ಮೂಲಕ ಭಾರೀ ಪ್ರಚಾರ ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ಬಿಜೆಪಿ ಕಾರ್ಯಕರ್ತರು ಚುನಾವಣಾ ಕಣದಲ್ಲಿದ್ದು ಪ್ರಚಾರ ಆರಂಭಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ