ಇಂದಿನಿಂದ ಬೆಂಗಳೂರು ಸೇರಿ ದ.ಕ 14 ಲೋಕಸಭೆ ಕ್ಷೇತ್ರಗಳ ನಾಮಪತ್ರ ಸಲ್ಲಿಕೆ ಆರಂಭ; ಕಾಂಗ್ರೆಸ್- ಜೆಡಿಎಸ್, ಬಿಜೆಪಿ ಅಭ್ಯರ್ಥಿ ಪಟ್ಟಿ ಇನ್ನೂ ಇಲ್ಲ!

ಬೆಂಗಳೂರುಲೋಕಸಭೆ ಚುನಾವಣೆ ಗೆಲ್ಲಲು ಕರ್ನಾಟಕದಲ್ಲೀಗ ಕಾಂಗ್ರೆಸ್​​-ಜೆಡಿಎಸ್​​​ ಸೇರಿದಂತೆ ಬಿಜೆಪಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್​​​.18 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಇದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಇದುವರೆಗೂ ಕಾಂಗ್ರೆಸ್​​, ಜೆಡಿಎಸ್​​ ಸೇರಿದಂತೆ ಬಿಜೆಪಿಯೂ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲ ಎಂಬುದು ಗಮನಾರ್ಹ.

ಮೊದಲ ಹಂತದಲ್ಲಿ ಮತದಾನ ಜರುಗಲಿರುವ ಕ್ಷೇತ್ರಗಳ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದೆ. ಇಂದಿನಿಂದಲೇ(ಮಾ.19) ಆರಂಭವಾಗಲಿರುವ ನಾಮಪತ್ರ ಸಲ್ಲಿಕೆಗೆ ಇದೇ ತಿಂಗಳ ಮಾರ್ಚ್​​​ 26 ಕೊನೆಯ ದಿನಾಂಕ. ಇತ್ತ ಟಿಕೆಟ್‌ಗಾಗಿ ಬಿಜೆಪಿಯಲ್ಲಿಯೇ ಭಾರೀ ಪೈಪೋಟಿ ನಡೆಯುತ್ತಿದ್ದರೇ, ಅತ್ತ ಆಡಳಿತಾರೂಢ ಮೈತ್ರಿ ಪಕ್ಷಗಳ ನಡುವೆ ಸೀಟು ಹಂಚಿಕೆ ಗೊಂದಲ ಇನ್ನೂ ಮುಂದುವರೆದಿದೆ. ಅಲ್ಲದೇ ಮೂರು ಪಕ್ಷಗಳ ಈ ಅಸಮಾಧಾನವೇ ಇನ್ನೂ ಅಭ್ಯರ್ಥಿಗಳ ಅಂತಿಮ ಪಟ್ಟಿ ಘೋಷಣೆಯಾಗದಿರುವುದಕ್ಕೇ ಕಾರಣ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.

ಇನ್ನು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ತುಮಕೂರು ಲೋಕಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಕಡೆ ಹಾಲಿ ಕಾಂಗ್ರೆಸ್ ಸದಸ್ಯರಿಗೆ ಟಿಕೆಟ್ ಖಚಿತ ಎಂದು ಹೇಳುತ್ತಿದೆ. ಜೆಡಿಎಸ್ ಕೂಡ ತನಗೆ ದೊರೆತಿರುವ ಎಂಟು ಕ್ಷೇತ್ರಗಳ ಪೈಕಿ ತೀವ್ರ ಕುತೂಹಲ ಕೆರಳಿಸಿರುವ ಹಾಸನ, ಮಂಡ್ಯ, ಶಿವಮೊಗ್ಗ ಕ್ಷೇತ್ರಗಳ ಅಭ್ಯರ್ಥಿಗಳನ್ನು ಮಾತ್ರ ಘೋಷಿಸಿದೆ. ಈ ಮಧ್ಯೆ ಬಿಜೆಪಿ ಮಾತ್ರ ಯಾವುದೇ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸದೇ ಮೌನ ತಾಳಿದೆ ಎನ್ನಲಾಗಿದೆ.

ಏಪ್ರಿಲ್​​​ 18ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಹಾಗೆಯೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್​​.26; ಬಳಿಕ ನಾಮಪತ್ರ ಹಿಂಪಡೆಯಲು ಮಾರ್ಚ್​​​.29 ರವರೆಗೂ ಗಡುವು ನೀಡಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿಗೆ 17, ಕಾಂಗ್ರೆಸ್​​ 9 ಮತ್ತು ಜೆಡಿಎಸ್ 2 ಸೀಟುಗಳನ್ನು ಗೆದ್ದಿದ್ದವು. ಆದರೆ, ಈ ಭಾರಿ ಫಲಿತಾಂಶ ಏನಾಗಲಿದೆ ಎನ್ನುವ ಚಿತ್ರಣ ಮೇ 23ರಂದು ತಿಳಿಯಲಿದೆ. ಈ ಬಾರಿ ಕೂಡ ಇದೇ ಫಲಿತಾಂಶ ಮರುಕಳಿಸಲಿದೆಯಾ? ಎಂಬ ಪ್ರಶ್ನೆ ಕಾಡುತ್ತಿದೆ. ಇಲ್ಲದೇ ಹೋದಲ್ಲಿ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿಯಿಂದಾಗಿ ಫಲಿತಾಂಶ ವ್ಯತ್ಯಾಸವಾಗಲಿದೆಯಾ? ಎಂಬ ಚರ್ಚೆಯೂ ನಡೆಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ