ಬೆಂಗಳೂರು, ಮಾ.19-ಬಡವರ ಹಸಿವು ನೀಗಿಸುವ ಸಲುವಾಗಿ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್ ಆಹಾರ ಕಳಪೆ ಎಂದು ಪಾಲಿಕೆ ಸದಸ್ಯ ಉಮೇಶ್ಶೆಟ್ಟಿ ಆರೋಪ ಸತ್ಯಕ್ಕೆ ದೂರವಾದುದು ಎಂದು ಮೇಯರ್ ಗಂಗಾಂಬಿಕೆ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಇಂದಿರಾ ಕ್ಯಾಂಟೀನ್ನಲ್ಲಿ ವಿತರಣೆಯಾಗುವ ಆಹಾರವನ್ನು ಪರಿಶೀಲಿಸಲಾಗುತ್ತದೆ. ಅಲ್ಲದೆ ನಮ್ಮ ಆರೋಗ್ಯಾಧಿಕಾರಿಗಳು ಆಹಾರದ ಗುಣಮಟ್ಟವನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಸಾರ್ವಜನಿಕರಿಗೆ ವಿತರಿಸಲಾಗುವುದು. ದಿನಕ್ಕೆ ಒಂದು ಲಕ್ಷ ಜನ ಊಟ ಮಾಡುತ್ತಾರೆ. ಎಲ್ಲಿಯೂ ಕೂಡ ಈ ತರಹ ಆರೋಪಗಳು ಕೇಳಿ ಬಂದಿರಲಿಲ್ಲ ಎಂದು ತಿಳಿಸಿದರು.
ಉಮೇಶ್ಶೆಟ್ಟಿ ಅವರು ಆಹಾರವನ್ನು ಪರಿಶೀಲನೆ ಮಾಡುವಾಗ ಯಾರ ಗಮನಕ್ಕೂ ತಾರದೆ ಪರಿಶೀಲನೆ ನಡೆಸಿದ್ದಾರೆ. ಆಹಾರವನ್ನು ತೆಗೆದುಕೊಂಡು ಹೋಗುವಾಗ ನಮ್ಮ ಅಥವಾ ಆಯುಕ್ತರ ಗಮನಕ್ಕೆ ತಾರದೆ ಆಹಾರ ತೆಗೆದುಕೊಂಡು ಹೋಗಿದ್ದು, ಪರಿಶೀಲಿಸಿದ ಆಹಾರ ಕಳಪೆ ಮಟ್ಟದ್ದಾಗಿದೆ ಎಂದು ಆರೋಪಿಸಿರುವುದು ಸರಿಯಲ್ಲ. ಅವರು ಆಹಾರವನ್ನು ಎಲ್ಲಿಂದ ತಂದರೋ, ಯಾವ ಸಮಯದಲ್ಲಿ ಯಾವ ಟಿಫನ್ ಬಾಕ್ಸ್ನಲ್ಲಿ ತೆಗೆದುಕೊಂಡು ಹೋಗಿದ್ದಾರೆ, ಯಾವ ಲ್ಯಾಬ್ನಲ್ಲಿ ಪರಿಶೀಲನೆ ನಡೆಸಿದರು ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದರು.
ಆಹಾರವನ್ನು ಪರಿಶೀಲನೆಗೆ ತೆಗೆದುಕೊಂಡು ಹೋಗುವಾಗ ಕೆಲವು ರೀತಿ ನೀತಿಗಳು ಇರುತ್ತದೆ. ಆದರೆ ಅದ್ಯಾವುದನ್ನೂ ಪಾಲಿಸದೆ ಈ ರೀತಿ ಆರೋಪ ಮಾಡಿರುವುದು ಜನರಲ್ಲಿ ಭೀತಿ ಉಂಟು ಮಾಡಿದೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ನನಗೆ ವಿಷಯ ತಿಳಿದ ಕೂಡಲೇ ಆಯುಕ್ತರು ಮತ್ತು ವಿಶೇಷ ಆಯುಕ್ತರ ಬಳಿ ಮಾತನಾಡಿದ್ದೇನೆ. 18 ಆಹಾರ ಕೇಂದ್ರಗಳಲ್ಲಿ ಆಹಾರ ತೆಗೆದುಕೊಂಡು ಲ್ಯಾಬ್ಗೆ ಕಳುಹಿಸುವಂತೆ ತಿಳಿಸಿದ್ದೇನೆ. ಬಿಬಿಎಂಪಿ ವತಿಯಿಂದ ಪ್ರತಿ ಬಾರಿಯೂ ದಾಸಪ್ಪ ಹಾಸ್ಟೆಲ್ನಲ್ಲಿ ಆಹಾರ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಈ ಆರೋಪದ ಬಗ್ಗೆ ನಾನು ತನಿಖೆ ಮಾಡಿ ಇದು ಸುಳ್ಳು ಎಂಬುದು ಸಾಬೀತಾದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್,ಮಾಜಿ ಮೇಯರ್ಗಳಾದ ಮಂಜುನಾಥರೆಡ್ಡಿ, ಪದ್ಮಾವತಿ, ಕಟ್ಟೆಸತ್ಯನಾರಾಯಣ, ಪಾಲಿಕೆ ಸದಸ್ಯೆ ನೇತ್ರಾ ನಾರಾಯಣ್ ಉಪಸ್ಥಿತರಿದ್ದರು.