ಇಂದು ಬಿಡುಗಡೆಯಾಗಲಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು, ಮಾ.19- ಭಾರೀ ನಿರೀಕ್ಷೆಯಿಂದ ಎದುರು ನೋಡುತ್ತಿರುವ ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆಯಾಗಲಿದೆ.

ಸಂಜೆ ನವದೆಹಲಿಯಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರಲಿದ್ದು, ಕರ್ನಾಟಕ ಸೇರಿದಂತೆ ಒಟ್ಟು ನೂರಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿಯನ್ನು ಇಂದು ತಡರಾತ್ರಿಯೊಳಗೆ ಬಿಡುಗಡೆ ಮಾಡಲಿದ್ದಾರೆ.

ನಿನ್ನೆ ರಾತ್ರಿಯೇ ಪಟ್ಟಿ ಬಿಡುಗಡೆಯಾಗಬೇಕಿತ್ತು. ಆದರೆ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಭಾನುವಾರ ಕ್ಯಾನ್ಸರ್‍ನಿಂದ ನಿಧನರಾದ ಕಾರಣ ನಿಗದಿಯಾಗಿದ್ದ ಸಭೆಯನ್ನು ಇಂದಿಗೆ ಮುಂದೂಡಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್‍ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‍ಮಾಧವ್, ಅರುಣ್‍ಲಾಲ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.

ಕರ್ನಾಟಕದಿಂದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೆ.ಎಸ್.ಈಶ್ವರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‍ರಾವ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ 28 ಲೋಕಸಭಾ ಕ್ಷೇತ್ರಗಳಿಗೂ ಯಡಿಯೂರಪ್ಪ ಅಭ್ಯರ್ಥಿಗಳ ಪಟ್ಟಿಯನ್ನು ಕಳೆದ ಭಾನುವಾರ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಿದ್ದಾರೆ. ಈ ಪಟ್ಟಿಯನ್ನು ಈಗಾಗಲೇ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗಿದೆ.

ಕೆಲವು ಕ್ಷೇತ್ರಗಳಿಗೆ ಓರ್ವ ಅಭ್ಯರ್ಥಿಯನ್ನು ಶಿಫಾರಸು ಮಾಡಲಾಗಿದ್ದರೆ, ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳಿಗೆ ಇಬ್ಬರಿಂದ ಮೂವರು ಅಭ್ಯರ್ಥಿಗಳ ಹೆಸರನ್ನು ಕಳುಹಿಸಿಕೊಡಲಾಗಿದೆ.

ಅಭ್ಯರ್ಥಿಗಳಲ್ಲಿ ಹೆಚ್ಚಿದ ಆತಂಕ: ಈ ಹಿಂದೆ ಯಡಿಯೂರಪ್ಪ ಹಾಲಿ 15 ಸಂಸದರಿಗೆ ಟಿಕೆಟ್ ಖಚಿತ ಎಂದು ಹೇಳಿದ್ದರಾದರೂ ಭಾನುವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಕೆಲವು ಕ್ಷೇತ್ರಗಳಿಗೆ ಟಿಕೆಟ್ ನೀಡುವ ಬಗ್ಗೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ ಸೇರಿದಂತೆ ಮತ್ತಿತರ ಕ್ಷೇತ್ರಗಳಿಗೆ ಹಾಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬಾರದೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳಿಗೆ ರಾಜ್ಯಘಟಕ ಇಬ್ಬರಿಂದ ಮೂವರ ಹೆಸರುಗಳನ್ನು ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

ಉಡುಪಿ-ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡುವ ಬಗ್ಗೆ ಅಲ್ಲಿನ ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಕ್ಷೇತ್ರದಿಂದ ಹಾಲಿ ಸಚಿವ ಜಯಪ್ರಕಾಶ್ ಹೆಗಡೆ ಹೆಸರು ಕೂಡ ಪಟ್ಟಿಗೆ ಸೇರ್ಪಡೆಯಾಗಿದೆ.

ದಕ್ಷಿಣ ಕನ್ನಡದಲ್ಲಿ ನಳಿನ್‍ಕುಮಾರ್ ಕಟಿಲ್ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿರುವುದರಿಂದ ಅಂತಿಮವಾಗಿ ಆರ್‍ಎಸ್‍ಎಸ್ ನಾಯಕ ಕಲ್ಲಡ್ಕ ಪ್ರಭಾಕರ್‍ಭಟ್ ಸೂಚಿಸುವ ಅಭ್ಯರ್ಥಿಯೇ ಅಂತಿಮವಾಗಲಿದ್ದಾರೆ.

ಉತ್ತರಕನ್ನಡದಲ್ಲಿ ಸಚಿವ ಅನಂತ್‍ಕುಮಾರ್ ಹೆಗಡೆಗೂ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಬಿಜೆಪಿ ಮುಖಂಡ ಜಿ.ವಿ.ಹೆಗಡೆ ಹೆಸರು ಹೆಚ್ಚುವರಿಯಾಗಿ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

ಬಿಜಾಪುರದಲ್ಲಿ ರಮೇಶ್ ಜಿಗಜಿಣಗಿಗೂ ವಿರೋಧವಿದ್ದರೂ ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೆಚ್ಚು ತಲೆ ಕೆಡಿಸಿಕೊಳ್ಳದೆ ಅವರಿಗೆ ಮಣೆ ಹಾಕಲು ತೀರ್ಮಾನಿಸಿದೆ.

ಬಾಗಲಕೋಟೆಯಲ್ಲಿ ಪಿ.ಸಿ.ಗದ್ದಿಗೌಡರ್ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿರುವುದರಿಂದ ಸ್ಥಳೀಯರ ವಿರೋಧವಿದ್ದರೂ ಅವರಿಗೆ ಟಿಕೆಟ್ ಖಾತರಿಯಾಗಿದೆ.

ಉಳಿದಂತೆ ರಾಯಚೂರಿನಲ್ಲಿ ಮಾಜಿ ಶಾಸಕ ತಿಪ್ಪರಾಜು, ಶಾಸಕ ಶಿವನಗೌಡ ನಾಯಕ್ ಅವರ ತಾಯಿ, ಮುಖಂಡ ಅನಂತನಾಯಕ್ ಹೆಸರುಗಳು ಪಟ್ಟಿಯಲ್ಲಿವೆ.

ತೀವ್ರ ಕಗ್ಗಂಟಾಗಿ ಪರಿಣಮಿಸಿರುವ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಈಗಾಗಲೇ ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಬಹುತೇಕ ಅವರೇ ಅಭ್ಯರ್ಥಿಯಾಗುವ ಸಂಭವವಿದೆ.

ಚಿಕ್ಕೋಡಿಯಲ್ಲಿ ಶಾಸಕ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಇಬ್ಬರಲ್ಲೊಬ್ಬರು ಹುರಿಯಾಳಾಗಲಿದ್ದಾರೆ.

ಕೋಲಾರದಲ್ಲಿ ನಾಲ್ವರು ಮತ್ತು ಚಿತ್ರದುರ್ಗದಲ್ಲಿ ಮೂವರು ಅಭ್ಯರ್ಥಿಗಳು ರೇಸ್‍ನಲ್ಲಿರುವುದರಿಂದ ಕೊನೆ ಕ್ಷಣದವರೆಗೂ ಯಾರಿಗೆ ಟಿಕೆಟ್ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಉಳಿದಂತೆ ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತ್‍ಕುಮಾರ್, ಚಾಮರಾಜನಗರದಿಂದ ವಿ.ಶ್ರೀನಿವಾಸ ಪ್ರಸಾದ್, ಮೈಸೂರು-ಕೊಡಗಿನಿಂದ ಪ್ರತಾಪ್‍ಸಿಂಹ, ಕೋಲಾರದ ಚಿಕ್ಕಬಳ್ಳಾಪುರದಿಂದ ಬಚ್ಚೇಗೌಡ ಅಖಾಡಕ್ಕಿಳಿಯಲಿದ್ದಾರೆ.

ಹಾಸನದಲ್ಲಿ ಮಾಜಿ ಸಚಿವ ಎ.ಮಂಜು ಸ್ಪರ್ಧಿಸಿದರೆ ಸಕ್ಕರೆ ಜಿಲ್ಲೆ ಮಂಡ್ಯದಿಂದ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಮುಂದುವರಿದರೆ, ಬಿಜೆಪಿ ಅವರಿಗೆ ಬಾಹ್ಯ ಬೆಂಬಲ ನೀಡಲಿದೆ.

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳು
1. ಬೆಳಗಾವಿ – ಸುರೇಶ್ ಅಂಗಡಿ
2. ಬಾಗಲಕೋಟೆ – ಪಿ.ಸಿ.ಗದ್ದೀಗೌಡರ್
3. ವಿಜಯಪುರ – ರಮೇಶ್ ಜಿಗಜಿಣಗಿ
4. ಬೀದರ್ – ಭಗವಂತ ಖೂಬಾ.
5. ಕೊಪ್ಪಳ – ಕರಡಿ ಸಂಗಣ್ಣ
6. ದಾವಣಗೆರೆ – ಜಿ.ಎಂ.ಸಿದ್ದೇಶ್ವರ್
7. ಶಿವಮೊಗ್ಗ – ಬಿ.ವೈ. ರಾಘವೇಂದ್ರ
8. ಉತ್ತರ ಕನ್ನಡ – ಅನಂತಕುಮಾರ್ ಹೆಗಡೆ
9. ದಕ್ಷಿಣ ಕನ್ನಡ – ನಳಿನ್‍ಕುಮಾರ್ ಕಟೀಲ್
10. ಧಾರವಾಡ-ಹುಬ್ಬಳ್ಳಿ – ಪ್ರಹ್ಲಾದ್ ಜೋಷಿ
11. ಹಾವೇರಿ-ಗದಗ – ಶಿವಕುಮಾರ್ ಉದಾಸಿ
12. ಚಿತ್ರದುರ್ಗ – ಮಾನಪ್ಪ ವಜ್ಜಲï/ಮಾದಾರ ಚೆನ್ನಯ್ಯ ಶ್ರೀಗಳು/ಜೆ.ಜನಾರ್ದನ ಸ್ವಾಮಿ
13. ತುಮಕೂರು – ಜೆ.ಎಸ್.ಬಸವರಾಜು/ ಸುರೇಶ್ ಗೌಡ/ ಮುದ್ದಹನುಮೇಗೌಡ
14. ಕೋಲಾರ – ಡಿ.ಎಸ್.ವೀರಯ್ಯ
15. ಬಳ್ಳಾರಿ – ದೇವೇಂದ್ರಪ್ಪ/ ವೆಂಕಟೇಶ್ ಪ್ರಸಾದ್
16. ಬೆಂಗಳೂರು ಉತ್ತರ – ಡಿ.ವಿ.ಸದಾನಂದಗೌಡ
17. ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್
18. ಬೆಂಗಳೂರು ದಕ್ಷಿಣ – ಡಾ. ತೇಜಸ್ವಿನಿ ಅನಂತಕುಮಾರ್
19. ಬೆಂಗಳೂರು ಗ್ರಾಮಾಂತರ – ಸಿ.ಪಿ.ಯೋಗೇಶ್ವರ್
20. ಹಾಸನ – ಎ.ಮಂಜು
21. ಮಂಡ್ಯ – ಡಾ.ಎಲ್.ಸಿದ್ಧರಾಮಯ್ಯ/ (ಸುಮಲತಾ ಅಂಬರೀಶ್‍ಗೆ ಬೆಂಬಲ)
22. ಮೈಸೂರು-ಕೊಡಗು – ಪ್ರತಾಪ್ ಸಿಂಹ
23. ಚಾಮರಾಜನಗರ – ವಿ.ಶ್ರೀನಿವಾಸ ಪ್ರಸಾದ್
24. ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ
25. ಚಿಕ್ಕೋಡಿ-ಸದಲಗಾ – ರಮೇಶ್ ಕತ್ತಿ
26. ರಾಯಚೂರು – ಬಸವರಾಜ್ ಹವಾಲ್ದಾರ್/ಆನಂದ್‍ನಾಯಕ್
27. ಕಲ್ಬುರ್ಗಿ – ಡಾ.ಉಮೇಶ್ ಜಾಧವ್/ರತ್ನಪ್ರಭ
28. ಚಿಕ್ಕಬಳ್ಳಾಪುರ – ಬಿ.ಎನ್.ಬಚ್ಚೇಗೌಡ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ