ಮೋದಿ ಪರ ಜೈಕಾರ ಹಾಕಿದವರ ವಿರುದ್ಧ ಪೊಲೀಸರ ಕ್ರಮ-ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಗುವುದು-ಮಾಜಿ ಡಿಸಿಎಂ ಆರ್.ಆಶೋಕ್

ಬೆಂಗಳೂರು, ಮಾ.19- ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಸಂವಾದ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಪರ ಜೈಕಾರ ಹಾಕಿದವರ ವಿರುದ್ಧ ಕಾನೂನು ಬಾಹೀರವಾಗಿ ಪೊಲೀಸರು ಕ್ರಮ ಜರುಗಿಸಿದರೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಸಿದೆ.

ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಸರ್ಕಾರದ ಸೂಚನೆಯಂತೆ ಮೋದಿ ಪರ ಜೈಕಾರ ಕೂಗಿದವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಿದರೆ ನಾವೂ ಕೂಡ ಸುಮ್ಮನಿರುವುದಿಲ್ಲ. ಪೊಲೀಸರ ವಿರುದ್ಧವೇ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರ ಮೇಲೆ ಅಭಿಮಾನವಿಟ್ಟುಕೊಂಡು ಐಟಿಸೆಕ್ಟರ್‍ನ ನೌಕರರಾದ ಅಭಿಲಾಷ್, ಹರೀಶ್, ಗೌರವಚಕ್ರತೀರ್ಥ ಮತ್ತು ಶ್ರೀನಾಥ್ ಜೈಘೋಷ ಕೂಗಿದ್ದರಿಂದ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ. ಅವರ ಬಳಿ ಇದ್ದ ಮೊಬೈಲ್‍ಗಳನ್ನು ಕಿತ್ತುಕೊಂಡು ಸುಳ್ಳು ಮೊಕದ್ದಮೆ ದಾಖಲಿಸಿ ಮುಂದೆ ಈ ರೀತಿ ನಡೆದುಕೊಂಡರೆ ಉಷಾರ್ ಎಂದು ಎಚ್ಚರಿಕೆ ನೀಡಲಾಗಿದೆ. ಇದು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಷಡ್ಯಂತ್ರ ಎಂದು ಕಿಡಿಕಾರಿದರು.

ಅವರಿಗೆ ಕಾನೂನು ಬೆಂಬಲ ಸೇರಿದಂತೆ ಎಲ್ಲಾ ರೀತಿಯ ನೆರವನ್ನು ಬಿಜೆಪಿ ನೀಡಲಿದೆ. ಜೈಕಾರ ಕೂಗಿದವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ.

ಅಭಿಮಾನವಿಟ್ಟುಕೊಂಡು ಜೈಕಾರ ಹಾಕಿದವರನ್ನೆಲ್ಲರನ್ನು ಬಿಜೆಪಿ ಕಾರ್ಯಕರ್ತರು ಎನ್ನಲು ಸಾಧ್ಯವೆ ಎಂದು ಅಶೋಕ್ ಪ್ರಶ್ನಿಸಿದರು.

ಈಗಾಗಲೇ ನಗರ ಪೊಲೀಸ್ ಆಯುಕ್ತರು ಮತ್ತು ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಮಾಹಿತಿ ಪಡೆದಿದ್ದೇನೆ. ಒಂದು ವೇಳೆ ಸುಳ್ಳು ಮೊಕದ್ದಮೆ ದಾಖಲಿಸಿದ್ದರೆ ಕಾನೂನು ಹೋರಾಟಕ್ಕೆ ಬಿಜೆಪಿ ಸಿದ್ದವಿದೆ ಎಂದು ಹೇಳಿದರು.

ರಾಹುಲ್‍ಗಾಂಧಿ ಹೋದ ಕಡೆಯಲೆಲ್ಲಾ ಈ ರೀತಿ ನಡೆದಿರುವುದು ಹೊಸದೇನಲ್ಲ. ಈ ಹಿಂದೆ ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಕಾಂಗ್ರೆಸ್ ಸಂವಾದ ಆಯೋಜಿಸಿದ್ದಾಗ ಅಲ್ಲಿಯೂ ಕೂಡ ಮೋದಿ ಪರವಾಗಿ ಜೈಕಾರ ಹಾಕಲಾಗಿತ್ತು.

ಇದನ್ನು ಸಹಿಸದ ಕಾಂಗ್ರೆಸಿಗರು ಜೈಕಾರ ಹಾಕಿದವರನ್ನೆಲ್ಲಾ ಬಿಜೆಪಿ ಕಾರ್ಯಕರ್ತರು ಎಂದು ಹೇಳುತ್ತಿದೆ. ಇದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ ಎಂದು ವಾಗ್ದಾಳಿ ನಡೆಸಿದರು.

ಟ್ವೆಂಟಿ ಪರ್ಸೆಂಟ್ ಕಮಿಷನ್ ಸರ್ಕಾರ:
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ಟೆನ್ ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಟೀಕೆ ಮಾಡಿದ್ದರು. ಈಗ ಸಮ್ಮಿಶ್ರ ಸರ್ಕಾರ ಇರುವುದರಿಂದ ಟ್ವೆಂಟಿ ಪರ್ಸೆಂಟ್ ಕಮಿಷನ್ ಸರ್ಕಾರವಾಗಿದೆ ಎಂದು ವ್ಯಂಗ್ಯವಾಡಿದರು.

ಹಿಂದೆ ಇಂದಿರಾಗಾಂಧಿ ಅವರು ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿ ವಾಕ್ ದೇಶದಲ್ಲಿ ಎಲ್ಲರ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಿದ್ದರು. ಅವರ ಮೊಮ್ಮಗ ರಾಹುಲ್‍ಗಾಂಧಿ ಕೂಡ ಅದೇ ಹಾದಿಯಲ್ಲಿ ನಡೆಯುತ್ತಿರುವುದು ದುರ್ದೈವ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲೆ ಮಾಡಬೇಕೆಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ ವಿರುದ್ಧ ನಾವು ದೂರು ಕೊಟ್ಟು ಹಲವು ದಿನಗಳಾಗಿವೆ. ಆದರೂ ಅವರನ್ನು ಈವರೆಗೂ ಯಾವ ಕಾರಣಕ್ಕಾಗಿ ಬಂಧಿಸಿಲ್ಲ. ನಿನ್ನೆ ಪ್ರಧಾನಿ ವಿರುದ್ಧ ಕಾಂಗ್ರೆಸ್ ಶಾಸಕರೊಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲ ವಿದೆಯೇ ಎಂದು ಅಶೋಕ್ ಪ್ರಶ್ನಿಸಿದರು.

ನ್ಯಾಯ ದೇಗುಲವಾಗಿದ್ದ ವಿಧಾನಸೌಧ ಇಂದು ಲಂಚಕೋರರು, ಲೂಟಿಕೋರರ ಸ್ಥಳವಾಗಿದೆ. 9 ತಿಂಗಳ ಅಧಿಕಾರ ನಡೆಸಿರುವ ಸಮ್ಮಿಶ್ರ ಸರ್ಕಾರದ ಸಾಧನೆ ಇದೇ ಎಂದು ಕುಹುಕವಾಡಿದರು.

ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಊಟ-ಉಪಹಾರವನ್ನು ನೀಡುತ್ತೇವೆ ಎಂದು ಆರಂಭಿಸಿದ್ದ ಇಂದಿರಾಕ್ಯಾಂಟೀನ್ ಕೂಡ ಇಂದು ಭ್ರಷ್ಟಾಚಾರದ ಕೂಪವಾಗಿದೆ. ಇಲ್ಲಿ ಕಳಪೆ ಆಹಾರವನ್ನು ವಿತರಣೆ ಮಾಡಿ ಕಮಿಷನ್ ಪಡೆಯುವ ದಂಧೆಯನ್ನು ಆರಂಭಿಸಿದ್ದಾರೆ.

ಒಂದೊಂದು ಕ್ಯಾಂಟೀನ್‍ನಲ್ಲಿ ದಿನಕ್ಕೆ 200 ಮಂದಿ ಊಟ ಮಾಡಿದರೆ ಅದನ್ನು ಎರಡು ಸಾವಿರಕ್ಕೆ ಲೆಕ್ಕ ಕೊಟ್ಟು ಚುನಾವಣೆಗೆ ಹಫ್ತಾ ವಸೂಲಿ ಮಾಡುವ ನೀಚ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ಕಳಪೆ ಆಹಾರವನ್ನು ವಿತರಣೆ ಮಾಡಲು ನಿರ್ದೇಶನ ನೀಡಿದವರು ಯಾರು ಎಂಬುದನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದರು.

ಇದರ ಹಿಂದೆ ಲೋಕಸಭೆ ಚುನಾವಣೆಗೆ ಹಫ್ತಾ ವಸೂಲಿ ಮಾಡುವ ಷಡ್ಯಂತ್ರ ಅಡಗಿದೆ. ಬಡವರ ಕ್ಯಾಂಟೀನ್‍ನಲ್ಲೂ ನಿಮಗೆ ಕಮಿಷನ್ ಬೇಕೆ ಎಂದು ಪ್ರಶ್ನಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಲೆಕ್ಕಾಧಿಕಾರಿ ಬಳಿ ಐಟಿ ಅಧಿಕಾರಿಗಳು ಎರಡು ಕೋಟಿ ಹಣವನ್ನು ಪತ್ತೆ ಮಾಡಿದ್ದಾರೆ. ಇದನ್ನೂ ಕೂಡ ಲೋಕಸಭೆ ಚುನಾವಣೆಗೆ ವಿತರಣೆ ಮಾಡಲು ಸಂಗ್ರಹಿಸಲಾಗಿತ್ತು. ಇದರ ಬಗ್ಗೆ ಸ್ವತಃ ಸಚಿವರೇ ಸ್ಪಷ್ಟನೆ ನೀಡಬೇಕು. ಅಧಿಕಾರಿ ಪರಾರಿಯಾಗಲು ಸೂಚನೆ ನೀಡಿದವರು ಯಾರು ಎಂದು ಪ್ರಶ್ನೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ವಕ್ತಾರರಾದ ಪ್ರಕಾಶ್, ಎ.ಎಚ್.ಆನಂದ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ