ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿ ವಿಚಾರ- ಹಿಂದೇಟು ಹಾಕುತ್ತಿರುವ ನಾಯಕರು

ಬೆಂಗಳೂರು, ಮಾ.19- ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿಗಳಾಗಲು ಕಾಂಗ್ರೆಸ್‍ನ ಘಟಾನುಘಟಿ ನಾಯಕರು ಹಿಂದೇಟು ಹಾಕುತ್ತಿರುವುದರಿಂದ ಅಂತಿಮ ಹಂತದಲ್ಲಿ ಶಾಸಕಿ ಸೌಮ್ಯಾರೆಡ್ಡಿ ಅವರ ಮನವೊಲಿಸುವ ಪ್ರಯತ್ನ ನಡೆದಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತ್‍ಕುಮಾರ್ ಅವರು ಆರು ಬಾರಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿ ತಮ್ಮದೇ ಆದ ವರ್ಚಸ್ಸು ಉಳಿಸಿಕೊಂಡಿದ್ದರು. ಅವರ ಅಕಾಲಿಕ ನಿಧನದಿಂದ ಅವರ ಪತ್ನಿ ತೇಜಸ್ವಿನಿ ಅನಂತ್‍ಕುಮಾರ್ ಅವರು ಈ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

ಈ ಕ್ಷೇತ್ರಕ್ಕೆ ಕಾಂಗ್ರೆಸ್‍ನಿಂದ ಅಭ್ಯರ್ಥಿಗಳಾಗಲು ಪ್ರಭಾವಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಆರಂಭದಲ್ಲಿ ಶಾಸಕರಾದ ರಾಮಲಿಂಗಾರೆಡ್ಡಿ, ಸೌಮ್ಯಾರೆಡ್ಡಿ, ರಾಜ್ಯಸಭಾ ಸದಸ್ಯ ರಾಜೀವ್‍ಗೌಡ, ಮಾಜಿ ಶಾಸಕ ಪ್ರಿಯಾಕೃಷ್ಣ, ಕೆಪಿಸಿಸಿ ಕಾರ್ಯದರ್ಶಿ ಗುರಪ್ಪನಾಯ್ಡು ಅವರ ಹೆಸರು ಕೇಳಿ ಬಂದಿದ್ದವು.

ಇವರಲ್ಲಿ ರಾಮಲಿಂಗಾರೆಡ್ಡಿ ಅವರು ತಮಗೆ ಬೆಂಗಳೂರಿನ ರಾಜಕಾರಣಕ್ಕಷ್ಟೇ ಆಸಕ್ತಿ ಇದ್ದು, ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಅಭ್ಯರ್ಥಿಯಾಗಲು ನಿರಾಕರಿಸಿದ್ದಾರೆ.

ಮಾಜಿ ಶಾಸಕ ಪ್ರಿಯಾಕೃಷ್ಣ ಅವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲೇ ಮತ್ತೆ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳುವ ಆಸಕ್ತಿ ಹೊಂದಿದ್ದು, ಬೇರೆ ಯಾವ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಅವರನ್ನು ಅಭ್ಯರ್ಥಿ ಮಾಡಲು ಹರಸಾಹಸ ನಡೆಸಿದ ಕಾಂಗ್ರೆಸ್ ಸೋತು ಸುಣ್ಣವಾಗಿದೆ.

ರಾಜ್ಯಸಭಾ ಸದಸ್ಯ ರಾಜೀವ್‍ಗೌಡ ಅವರು ಚುನಾವಣಾ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಬ್ಯುಸಿಯಾಗಿದ್ದು, ನಾನು ಈ ಕ್ಷೇತ್ರದಲ್ಲಿ ಪ್ರವಾಸ ಮಾಡಿಲ್ಲ. ಏಕಾಏಕಿ ಚುನಾವಣೆಗೆ ನಿಂತರೆ ಮುಖಭಂಗವಾಗುತ್ತದೆ. ಹಾಗಾಗಿ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ಉಗ್ರಪ್ಪ ನಾಯ್ಡು ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದರಾದರೂ ಕಾರ್ಯಕರ್ತರು ಅವರ ಪರ ಒಲವು ತೋರುತ್ತಿಲ್ಲ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರ ಆಪ್ತರಾಗಿರುವ ಗುರಪ್ಪ ನಾಯ್ಡು ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್‍ನ ಆಕಾಂಕ್ಷಿಸಿಯಾಗಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲೂ ಸೋಲು ಕಂಡಿದ್ದರು. ಹೀಗಾಗಿ ಅವರ ಆಯ್ಕೆಯೂ ಗೊಂದಲದಲ್ಲಿದೆ.

ಅಂತಿಮವಾಗಿ ಸೌಮ್ಯಾರೆಡ್ಡಿ ಅವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಹರಸಾಹಸ ನಡೆಸುತ್ತಿದೆ. ಆದರೆ, ಸೌಮ್ಯರೆಡ್ಡಿ ಅವರು ತಾವು 8 ತಿಂಗಳ ಹಿಂದಷ್ಟೇ ಶಾಸಕಿಯಾಗಿ ಆಯ್ಕೆಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ. ಈ ಹಂತದಲ್ಲಿ ರಾಷ್ಟ್ರ ರಾಜಕಾರಣಕ್ಕೆ ಹೋದರೆ ಜಯನಗರ ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ತಮ್ಮನ್ನು ರಾಜ್ಯ ರಾಜಕಾರಣದಲ್ಲೇ ಮುಂದುವರೆಸಬೇಕೆಂದು ವರಿಷ್ಟರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಆದರೂ ಪಟ್ಟು ಬಿಡದ ಕಾಂಗ್ರೆಸ್ ನಾಯಕರು ಸೌಮ್ಯಾರೆಡ್ಡಿ ಅವರನ್ನೇ ಚುನಾವಣೆಗೆ ನಿಲ್ಲಿಸಲು ಮನವೊಲಿಸುವಂತೆ ರಾಮಲಿಂಗಾರೆಡ್ಡಿ ಅವರಿಗೆ ದುಂಬಾಲು ಬಿದ್ದಿದ್ದಾರೆ.

ಅಂತಿಮ ಕ್ಷಣದಲ್ಲಿ ಯಾರೂ ಮುಂದೆ ಬರದೇ ಇದ್ದರೆ ಸೌಮ್ಯಾರೆಡ್ಡಿ ಅವರನ್ನು ಕಣಕ್ಕಿಳಿಸುವುದು ಕಾಂಗ್ರೆಸ್‍ಗೆ ಅನಿವಾರ್ಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ