![congress-flag-a](http://kannada.vartamitra.com/wp-content/uploads/2019/01/congress-flag-a-678x355.jpg)
ಬೆಂಗಳೂರು, ಮಾ.19- ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದರೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳದೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಇಂದು ದೆಹಲಿಯಲ್ಲಿ ನಡೆಯಬೇಕಿದ್ದ ಕೇಂದ್ರ ಚುನಾವಣಾ ಸಮಿತಿ ಸಭೆ ಮತ್ತೆ ಮಾ.22ಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆ ಮತ್ತಷ್ಟು ವಿಳಂಬವಾಗಲಿದ್ದು, ನಾಮಪತ್ರ ಸಲ್ಲಿಸುವ ಕೊನೆ ದಿನಾಂಕದವರೆಗೂ ಗೊಂದಲಗಳು ಸೃಷ್ಟಿಯಾಗಲಿವೆ.
ರಾಜ್ಯದ 28 ಲೋಕಸಭೆಗಳ ಪೈಕಿ ಜೆಡಿಎಸ್ಗೆ ಬಿಟ್ಟುಕೊಟ್ಟಿರುವ 8 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 20 ಕ್ಷೇತ್ರಗಳಿಗೆ ಇಂದು ಅಭ್ಯರ್ಥಿಗಳು ಆಯ್ಕೆಯಾಗುವ ಸಾಧ್ಯತೆ ಇತ್ತು.
ಆದರೆ, ಇಂದು ನಡೆಯಬೇಕಾಗಿದ್ದ ಕೇಂದ್ರ ಚುನಾವಣಾ ಸಮಿತಿ ಸಭೆ ಮತ್ತೆ ಮುಂದೂಡಿಕೆಯಾಗಿದೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆ ಇನ್ನೂ ಮೂರು ದಿನಗಳ ಕಾಲ ವಿಳಂಭವಾಗಿದ್ದು, ಆಕಾಂಕ್ಷಿಗಳಲ್ಲಿ ತಳಮಳ ಆರಂಭವಾಗಿದೆ.
ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದು ಟಿಕೆಟ್ ಘೋಷಣೆಯಾದರೆ ಬಿ ಫಾರಂ ಸಿಕ್ಕವರು ಖುಷಿಯಿಂದ ನಾಮಪತ್ರ ಸಲ್ಲಿಸಬಹುದುದಿತ್ತು. ಬಿ ಫಾರಂ ಸಿಕ್ಕದಿದ್ದವರು ಪರ್ಯಾಯ ದಾರಿ ಬಗ್ಗೆ ಯೋಚಿಸುವ ಅವಕಾಶವಿತ್ತು. ಹೀಗಾಗಿ ಪರ್ಯಾಯಕ್ಕೆ ಅವಕಾಶವಾಗದಂತೆ ಕೊನೆಕ್ಷಣದವರೆಗೂ ಟಿಕೆಟ್ ಘೋಷಣೆಗೆ ಕಾಂಗ್ರೆಸ್ ವಿಳಂಬ ನೀತಿ ಅನುಸರಿಸುತ್ತಿದೆ.
ರಾಜ್ಯ ಚುನಾವಣಾ ಸಮಿತಿ ಸಭೆ ಶಿಫಾರಸು ಮಾಡಿದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿರುವ ಸ್ಕ್ರೀನಿಂಗ್ ಕಮಿಟಿ ಅಂತಿಮಗೊಳಿಸಿದ್ದು, ಸುಮಾರು 15 ಕ್ಷೇತ್ರಗಳಿಗೆ ಏಕ ವ್ಯಕ್ತಿ ಹೆಸರನ್ನು ಶಿಫಾರಸು ಮಾಡಲಾಗಿದೆ.
ಅಷ್ಟೂ ಕ್ಷೇತ್ರಗಳಿಗೆ ರಾಹುಲ್ಗಾಂಧಿ ನೇತೃತ್ವದ ಕೇಂದ್ರ ಚುನಾವಣಾ ಸಮಿತಿ ಸಭೆ ಅಂಕಿತ ಹಾಕಲಿದೆ. ಅದರಲ್ಲೂ 9ಮಂದಿ ಹಾಲಿ ಸಂಸದರಿದ್ದಾರೆ. ಮೈಸೂರು, ಬೆಂಗಳೂರು ಕೇಂದ್ರ, ಧಾರವಾಡ, ಹಾವೇರಿ, ದಾವಣಗೆರೆ, ದಕ್ಷಿಣ ಕನ್ನಡ ಕ್ಷೇತ್ರಗಳಿಗೆ ಒಬ್ಬ ಅಭ್ಯರ್ಥಿಯ ಹೆಸರನ್ನು ಶಿಫಾರಸು ಮಾಡಲಾಗಿದೆ. ತುಮಕೂರು ಹೊರತುಪಡಿಸಿ ಉಳಿದ 9 ಕ್ಷೇತ್ರಗಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಖಚಿತ ಪಡಿಸಲಾಗಿದೆ. ಹೀಗಾಗಿ ಕಲಬುರ್ಗಿಯ ಮಲ್ಲಿಕಾರ್ಜುನ ಖರ್ಗೆ, ಬಳ್ಳಾರಿಯ ವಿ.ಎಸ್. ಉಗ್ರಪ್ಪ, ರಾಯಚೂರಿನ ಬಿ.ವಿ.ನಾಯಕ್, ಚಾಮರಾಜನಗರದ ಆರ್.ಧ್ರುವನಾರಾಯಣ್, ಚಿಕ್ಕಬಳ್ಳಾಪುರದ ಎಂ.ವೀರಪ್ಪಮೊಯ್ಲಿ, ಕೋಲಾರದ ಕೆ.ಎಚ್.ಮುನಿಯಪ್ಪ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಡಿ.ಕೆ.ಸುರೇಶ್, ಚಿಕ್ಕೋಡಿಯ ಪ್ರಕಾಶ್ ಹುಕ್ಕೇರಿ, ಚಿತ್ರದುರ್ಗದ ಬಿ.ಎನ್.ಚಂದ್ರಪ್ಪ ಅವರಿಗೆ ಹೈಕಮಾಂಡ್ ಟಿಕೆಟ್ ಖಚಿತ ಪಡಿಸಿದೆ.
ಉಳಿದಂತೆ ಬಾಗಲಕೋಟೆ, ಬೀದರ್, ಕೊಪ್ಪಳ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಕ್ಷೇತ್ರಗಳಿಗೆ ಎರಡೆರಡು ಹೆಸರುಗಳ ಶಿಫಾರಸ್ಸಾಗಿದ್ದು, ಕೇಂದ್ರ ಚುನಾವಣಾ ಸಮಿತಿ ಯಾರಿಗೆ ಟಿಕೆಟ್ ನೀಡಲಿದೆ ಎಂದು ಕಾದು ನೋಡಬೇಕಿದೆ.
ಕೊಪ್ಪಳ, ಬಾಗಲಕೋಟೆ ಕ್ಷೇತ್ರಗಳ ಅಭ್ಯರ್ಥಿಯ ಆಯ್ಕೆ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದ್ದು, ಅವರು ಈಗಾಗಲೇ ಎಲ್ಲಾ ಲೆಕ್ಕಾಚಾರಗಳನ್ನು ಅಳೆದು ತೂಗಿ ಕೆಲವರ ಹೆಸರನ್ನು ಶಿಫಾರಸು ಮಾಡಿದ್ದಾರೆ.
ರಾಹುಲ್ಗಾಂಧಿ ನೇತೃತ್ವದ ತಂಡ ಸಿದ್ದರಾಮಯ್ಯ ಅವರ ಶಿಫಾರಸನ್ನು ಮಾನ್ಯ ಮಾಡುವುದರಿಂದ ಕೊಪ್ಪಳಕ್ಕೆ ಬಸವರಾಜ್ ಹಿಟ್ನಾಳ್ ಅವರಿಗೆ, ಬಾಗಲಕೋಟೆಗೆ ವೀಣಾ ಕಾಶಪ್ಪನವರ್ ಅಥವಾ ಬಾಯಕ್ಕಮೇಟಿಅವರಲ್ಲಿ ಒಬ್ಬರಿಗೆ ಟಿಕೆಟ್ ಲಭಿಸಲಿದೆ.
ಬೀದರ್ ಕ್ಷೇತ್ರದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ ಅವರ ಹೆಸರು ಅಂತಿಮಗೊಂಡಿದ್ದು, ಅವರು ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದರಿಂದ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಲಿದೆ ಎಂಬುದನ್ನು ಕುತೂಹಲ ಕೆರಳಿಸಿದೆ.
ಧಾರವಾಡದಿಂದ ವಿನಯ್ಕುಲಕರ್ಣಿ, ದಾವಣಗೆರೆಯಿಂದ ಎಸ್.ಎಸ್.ಮಲ್ಲಿಕಾರ್ಜುನ್, ದಕ್ಷಿಣ ಕನ್ನಡದಿಂದ ರಾಜೇಂದ್ರ ಕುಮಾರ್, ಮೈಸೂರಿನಿಂದ ವಿಜಯ್ಶಂಕರ್, ಬೆಳಗಾವಿಯಿಂದ ಅಂಜಲಿ ನಿಂಬಾಳ್ಕರ್ ಅಥವಾ ವೀರಕುಮಾರ್ ಪಾಟೀಲ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ.
ಈ ಬಾರಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಎರಡೂ ಪಕ್ಷಗಳ ಶಕ್ತಿಯನ್ನು ಕ್ರೂಢೀಕರಿಸಿ ಬಿಜೆಪಿಯನ್ನು ಸೋಲಿಸಲು ಶತಾಯಗತಾಯ ಪ್ರಯತ್ನ ನಡೆಯುತ್ತಿದೆ.
ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.