ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಅಖಾಡ ರಂಗೇರಿದ್ದು, ಮೊದಲ ಹಂತದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಕ್ಷೇತ್ರಗಳಲ್ಲಿ ಇದುವರೆಗೂ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಬಿಜೆಪಿಯೂ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲ. ಈ ನಡುವೆಯೇ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಸಿಎಂ ಮುಂದಾಗಿದ್ದಾರೆ.
ಶುಭಶುಕ್ರವಾರದಿಂದ ಸಿಎಂ ಕುಮಾರಸ್ವಾಮಿ ಪ್ರಚಾರ ಆರಂಭಿಸಲು ಮುಂದಾಗಿದ್ದು, ಮಗನ ಪರ ಮೊದಲ ಪ್ರಚಾರ ಆರಂಭಿಸಲಿದ್ದಾರೆ. ಮಂಡ್ಯದಲ್ಲಿ ಸುಮಲತಾ ಪ್ರಬಲ ಸ್ಪರ್ಧಿಯಾಗಿದ್ದು, ಅವರ ಪರ ಇಡೀ ಚಿತ್ರರಂಗವೇ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ಪರ ಹೆಚ್ಚಿನ ಪ್ರಚಾರ ಕೈಗೊಳ್ಳಲು ಸಿಎಂ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ.
ಸಿನಿಮಾ ನಟ, ನಟಿಯರ ಪ್ರಚಾರದಿಂದ ಸುಮಲತಾ ಅವರಿಗೆ ಆನೆಬಲ ತರಲಿದ್ದು, ಈ ಹಿನ್ನೆಲೆಯಲ್ಲಿ ನಿಖಿಲ್ ಪರ ಯಾವ ರೀತಿ ಪ್ರಚಾರ ನಡೆಸಬೇಕು ಎಂಬ ಬಗ್ಗೆ ಕೂಡ ಸಿಎಂ ನಿರ್ಧರಿಸಿದ್ದಾರೆ. . ಈಗಾಗಲೇ ಜಿಲ್ಲೆಯಲ್ಲಿ ಜೆಡಿಎಸ್ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದು, ಕಾಂಗ್ರೆಸ್ ನಾಯಕರಿಗೂ ಪ್ರಚಾರದಲ್ಲಿ ಭಾಗಿಯಾಗುವಂತೆ ಸೂಚನೆ ಮಾಡಲಾಗಿದೆ.
ಮಂಡ್ಯ ಹೊರತಾಗಿ ಬೇರೆ ಎಲ್ಲ ಕ್ಷೇತ್ರಗಳಲ್ಲಿ ಕೂಡ ಸಿಎಂ ಪ್ರಚಾರ ನಡೆಸಲಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳಿರುವ ಕ್ಷೇತ್ರಗಳಲ್ಲಿ ಮೂರು ದಿನಗಳ ಕಾಲ ಪ್ರಚಾರ ನಡೆಸಲಿದ್ದು, ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ಒಂದು ದಿನ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ.
ಪ್ರಚಾರ ಆರಂಭಕ್ಕೂ ಮುನ್ನ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಬಗ್ಗೆ ಕೂಡ ಸಿಎಂ ಚಿಂತನೆ ನಡೆಸಿದ್ದಾರೆ. 10 ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು ಎಂಬ ಬಗ್ಗೆ ಈಗಾಗಲೇ ಜೆಡಿಎಸ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮವಾಗಿದ್ದು, ಇಂದು ಅವರು ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.