ಜೈಲು ಪಾಲಾಗುತ್ತಿದ್ದ ಅನಿಲ್ ಅಂಬಾನಿಗೆ ಮುಖೇಶ್ ಅಂಬಾನಿ ಸಹಾಯ: ಅಣ್ಣ-ಅತ್ತಿಗೆ ಸಹಾಯಕ್ಕೆ ಹೃದಯಪೂರ್ವಕ ಧನ್ಯವಾದ ಹೇಳಿದ ತಮ್ಮ

ನವದೆಹಲಿ: ಎರಿಕ್ಸನ್ ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಯಿಂದ ತನ್ನನ್ನು ಪಾರು ಮಾಡಿದ ಅಣ್ಣ ಮುಕೇಶ್ ಅಂಬಾನಿಗೆ ಅನಿಲ್ ಅಂಬಾನಿ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.

ಎರಿಕ್ಸನ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಿಲಯನ್ಸ್ ಕಮ್ಯೂನಿಕೇಶನ್(ಆರ್‌ಕಾಂ) ತಪ್ಪು ಎಸಗಿದ್ದು ಈ ಆದೇಶ ಪ್ರಕಟವಾದ 4 ವಾರದ ಒಳಗಡೆ ಹಣವನ್ನು ಪಾವತಿಸಬೇಕು. ಒಂದು ವೇಳೆ ಹಣವನ್ನು ಪಾವತಿ ಮಾಡದಿದ್ದಲ್ಲಿ ಅನಿಲ್ ಅಂಬಾನಿಯನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಅವಧಿ ಮುಗಿಯುವ ಒಂದು ದಿನದ ಮೊದಲು ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಹಣ ಪಾವತಿ ಸಂಬಂಧ ಅನಿಲ್ ಅಂಬಾನಿಗೆ ಸಹಾಯ ಮಾಡಿದ್ದರು. ಮುಕೇಶ್ ಅಂಬಾನಿ ಹಣ ನೀಡಿದ ಬಳಿಕ ಸೋಮವಾರ ಆರ್‌ಕಾಂ ಕಂಪನಿ ಎರಿಕ್ಸನ್ ಕಂಪನಿಗೆ 458.77 ಕೋಟಿ ರೂ. ಹಣವನ್ನು ಪಾವತಿಸಿದೆ.

ಈ ಸಂಬಂಧ ಆರ್‌ಕಾಂ ವಕ್ತಾರರು ಅನಿಲ್ ಅಂಬಾನಿ ಅವರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. “ಕಷ್ಟದ ಸಮಯದಲ್ಲಿ ನನ್ನ ಬೆಂಬಲವಾಗಿ ನಿಂತ ಅಣ್ಣ ಮುಕೇಶ್ ಅಂಬಾನಿ ಮತ್ತು ಅತ್ತಿಗೆ ನೀತಾ ಅವರಿಗೆ ಧನ್ಯವಾದಗಳು. ನಮ್ಮ ನಡುವಿನ ಗಟ್ಟಿಯಾದ ಕುಟುಂಬದ ಬಾಂಧವ್ಯದ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿದು ಸಹಾಯ ಮಾಡಿದ್ದಕ್ಕೆ ನಾನು ಚಿರಋಣಿಯಾಗಿದ್ದೇನೆ. ನನ್ನ ಹೃದಯ ತುಂಬಿ ಬಂದಿದೆ” ಎಂದು ಅನಿಲ್ ಅಂಬಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Anil Ambani thanks elder brother Mukesh Ambani for paying Ericsson dues

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ