ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ-ಘಟನೆಯಲ್ಲಿ ಬೈಕ್ ಸವಾರನ ಸಾವು

ತುಮಕೂರು, ಮಾ.19-ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಬ್ಬಿ ಗೇಟ್ ರಿಂಗ್‍ರೋಡ್‍ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಗೂಳೂರು ಬಳಿಯ ವಡ್ಡರಹಳ್ಳಿ ಗ್ರಾಮದ ನಿವಾಸಿ ಚಂದ್ರಶೇಖರ ನಾಯಕ್(24) ಮೃತಪಟ್ಟ ದುರ್ದೈವಿ.

ತುಮಕೂರು ಕಡೆಯಿಂದ ಗುಬ್ಬಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಗೆ ಎದುರಿನಿಂದ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಪಘಾತವಾಗುತ್ತಿದ್ದಂತೆ ಲಾರಿಯನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಸ್ಥಳಕ್ಕಾಗಮಿಸಿದ ನಗರ ಸಂಚಾರಿ ಠಾಣೆ ಇನ್ಸ್‍ಪೆಕ್ಟರ್ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ