ಆಭರಣಗಳನ್ನು ಪಾಲಿಶ್ ಮಾಡುವ ನೆಪದಲ್ಲಿ ಆಭರಣ ಅಪಹರಣ

ಚನ್ನಪಟ್ಟಣ, ಮಾ.19- ಆಭರಣಗಳನ್ನು ಪಾಲಿಶ್ ಮಾಡುವ ನೆಪದಲ್ಲಿ ಅತ್ತೆ-ಸೊಸೆಯ ಮನಸ್ಸನ್ನು ಬೇರೆಡೆ ಸೆಳೆದು ಲಕ್ಷಂತರ ರೂ. ಮೌಲ್ಯದ ಚಿನ್ನದ ಮಾಂಗಲ್ಯಸರವನ್ನು ಅಪಹರಣ ಮಾಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಿಟ್ಟಮಾರನಹಳ್ಳಿ ನಡೆದಿದೆ.

ಲಕ್ಷಂತರ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಳೆದು ಕೊಂಡಿರುವವರು ಸರೋಜಮ್ಮ ಹಾಗೂ ರಾಜೇಶ್ವರಿ ಎಂದು ತಿಳಿದು ಬಂದಿದೆ.

ದ್ವಿಚಕ್ರ ವಾಹನದಲ್ಲಿ ಬಂದ ಸುಮಾರು 25 ರಿಂದ 35 ವರ್ಷದ ಅಪರಿಚಿತ ವ್ಯಕ್ತಿಗಳು ಕೇವಲ ಮಹಿಳೆಯರೇ ಇರುವ ಮನೆಗಳನ್ನು ಆಯ್ಕೆ ಮಾಡಿಕೊಂಡು, ಹಳೆಯ ತಾಮ್ರ ಹಾಗೂ ಬೆಳ್ಳಿ ವಸ್ತುಗಳನ್ನು ಪಾಲಿಶ್ ಮಾಡಿ ಹೊಸದು ಮಾಡಿಕೊಡುವುದಾಗಿ ನಂಬಿಸಿದ್ದಾರೆ.

ಮನೆ ಬಳಿ ಬಂದ ಅಪರಿಚಿತರಿಗೆ ಒಂದು ತಾಮ್ರದ ವಸ್ತುವನ್ನು ನೀಡಿದ್ದಾರೆ. ತಾಮ್ರದ ವಸ್ತುವನ್ನು ಪಡೆದ ಅವರಿಬ್ಬರು ಅದನ್ನು ಪಾಲಿಶ್ ಮಾಡಿ ನೀಡಿದ್ದಾರೆ.

ಹಳೆಯ ತಾಮ್ರದ ವಸ್ತುವನ್ನು ಹೊಸದು ರೀತಿಯಲ್ಲಿ ಮಾಡಿಕೊಟ್ಟಿದ್ದರಿಂದ ಅವರನ್ನು ನಂಬಿದ ಅತ್ತೆ-ಸೊಸೆ ಮೊಮ್ಮಗನ ಬೆಳ್ಳಿ ಕಡಗ ನೀಡಿ ಅದನ್ನು ಕೂಡ ಹೊಸದು ರೀತಿಯಲ್ಲಿ ಪಾಲಿಶ್ ಮಾಡಿಸಿಕೊಂಡಿದ್ದಾರೆ.

ನಂತರ ಅಪರಿಚಿತರಿಬ್ಬರು ಹಳೆಯ ಚಿನ್ನವನ್ನು ಇದೇ ರೀತಿ ಪಾಲಿಶ್ ಮಾಡಿಕೊಡುವುದಾಗಿ ತಿಳಿಸಿ ಅತ್ತೆ-ಸೊಸೆಯರ ಮನಸ್ಸನ್ನು ತಮ್ಮತ್ತ ಸೆಳೆದು ಕೊಂಡಿದ್ದಾರೆ.

ತಾಮ್ರ ಹಾಗೂ ಬೆಳ್ಳಿ ಕಡಗದ ರೀತಿಯಲ್ಲಿ ತಮ್ಮ ಮಾಂಗಲ್ಯದ ಸರವನ್ನು ಪಾಲಿಶ್ ಮಾಡಿಸಿಕೊಳ್ಳಬೇಕೆಂದು ಅತ್ತೆ-ಸೊಸೆ ಇಬ್ಬರು ತಮ್ಮ ಮಾಂಗಲ್ಯ ಸರಗಳನ್ನು ಅಪರಿಚಿತರ ಕೈಗೆ ನೀಡಿದ್ದಾರೆ.

ಎರಡು ಮಾಂಗಲ್ಯ ಸರಗಳನ್ನು ತಮ್ಮ ಕೈಗೆ ಪಡೆದ ಅವರು ಮೊದಲು ಮಾಂಗಲ್ಯ ಸರಗಳನ್ನು ಬಿಸಿ ನೀರಿನಲ್ಲಿ ಇಡಬೇಕೆಂದು ತಿಳಿಸಿ ಅವರು ಅಡುಗೆ ಮನೆಗೆ ತೆರಳಿ ಕುಕ್ಕರ್‍ನಲ್ಲಿಟ್ಟು ಬಿಸಿ ಮಾಡುವಂತೆ ತಿಳಿಸಿದ್ದಾರೆ. ಕೆಲ ಸೆಕೆಂಡುಗಳು ಅಡುಗೆ ಮನೆಯಲ್ಲಿದ್ದ ಅವರು ಕೆಟ್ಟ ವಾಸನೆ ಬರುವುದರಿಂದ ಮನೆಯ ಹೊರಗಡೆ ಕುಳಿತುಕೊಳ್ಳುವುದಾಗಿ ತಿಳಿಸಿ ಹೊರಹೋಗಿ ಕುಳಿತಿದ್ದಾರೆ.

ಅಪರಿಚಿತರನ್ನು ನಂಬಿದ ಇವರು ಮನೆ ಮುಂದೆ ಕುಳಿತಿದ್ದಾರೆಂದು ತಿಳಿದು ಕುಕ್ಕರ್ ಆಫ್ ಮಾಡಲು ಅಡುಗೆ ಮನೆಗೆ ಹೋಗಿ ಬರುವುದೊಳಗಾಗಿ ಇಬ್ಬರು ನಾಪತ್ತೆಯಾಗಿದ್ದಾರೆ. ತಕ್ಷಣ ಕುಕ್ಕರ್‍ನಲ್ಲಿರುವ ಮಾಂಗಲ್ಯಸರಗಳನ್ನು ನೋಡಲು ಹೋದಾಗ ಅಲ್ಲಿ ಮಾಂಗಲ್ಯ ಸರಗಳು ನಾಪತ್ತೆಯಾಗಿದ್ದವು.

ಸುಮಾರು 70 ರಿಂದ 80 ಗ್ರಾಂ ತೂಗುವ 2 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರಗಳಾಗಿದ್ದು, ದ್ವಿಚಕ್ರವಾಹನದಲ್ಲಿ ಬಂದಿದ್ದ ಅವರು ಗಾವುದ ದೂರದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಇವರ ಮನೆಗೆ ಬಂದಿದ್ದರು.

ಈ ಪ್ರಕರಣದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು , ಪ್ರೊಬೆಷನರಿ ಡಿವೈಎಸ್‍ಪಿ ಪೃಥ್ವಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ