ಆಂಧ್ರಪ್ರದೇಶ ಮತ್ತು ಅರುಣಾಚಲಪ್ರದೇಶ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ತನ್ನ
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಆಂಧ್ರಪ್ರದೇಶದ 123 ಕ್ಷೇತ್ರಗಳು ಹಾಗೂ ಅರುಣಾಚಲ ಪ್ರದೇಶದ 54 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು
ಪ್ರಕಟಿಸಲಾಗಿದೆ.
ಆಂದ್ರಪ್ರದೇಶದ 175 ವಿಧಾನಸಭಾ ಕ್ಷೇತ್ರ ಹಾಗೂ ಅರುಣಾಚಲ ಪ್ರದೇಶ 60 ಸ್ಥಾನಗಳಿಗೆ ಮುಂದಿನ ತಿಂಗಳ
11 ರಂದು ಚುನಾವಣೆ ನಡೆಯಲಿದೆ.
*****************************
ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ, ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳ
ಮಿತ್ರಪಕ್ಷಗಳಿಗೆ ಕಾಂಗ್ರೆಸ್ 7 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.
ಲಕ್ನೋದಲ್ಲಿಂದು ಉತ್ತರ ಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜ್ ಬಬ್ಬರ್ ಈ ವಿಷಯ ತಿಳಿಸಿ, ಅಪ್ನಾದಳ
ಪಕ್ಷಕ್ಕೆ 2 ಸ್ಥಾನ ಹಾಗೂ ಜನ ಅಧಿಕಾರ್ ಪಕ್ಷಕ್ಕೆ ಕೆಲ ಸ್ಥಾನ ಬಿಟ್ಟುಕೊಡಲು ನಿರ್ಧರಿಸಲಾಗಿದೆ.
*****************************
ಮುಂಬರುವ ಲೋಕಸಭಾ ಚುನಾವಣೆಗೆ ಬಿಹಾರದಲ್ಲಿ ಎನ್‍ಡಿಎ ಮಿತ್ರ ಪಕ್ಷಗಳು ಸೀಟು ಹಂಚಿಕೆ ಹೊಂದಾಣಿಕೆ
ಮಾಡಿಕೊಂಡಿವೆ. ಪಾಟ್ನಾದಲ್ಲಿಂದು ಬಿಜೆಪಿ, ಜೆಡಿಯು ಮತ್ತು ಎಲ್‍ಜೆಪಿ ಪಕ್ಷಗಳು ಈ ವಿಷಯವನ್ನು ಜಂಟಿ
ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದವು.
ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 17 ಸ್ಥಾನಗಳು, ಉಳಿದ
ಆರು ಲೋಕಸಭಾ ಕ್ಷೇತ್ರಗಳಾದ ಹಾಜಿಪುರ, ವೈಶಾಲಿ, ಸಮಸ್ತಿಪುರ್, ಜಾಮಿ ಖಗರೀಯಾ ಮತ್ತು ನಾವಡ ಕ್ಷೇತ್ರಗಳಲ್ಲಿ
ಎಲ್‍ಜೆಪಿ ಸ್ಪರ್ಧೆ ಮಾಡಲಿದೆ.
*****************************
ಆಂಧ್ರಪ್ರದೇಶದ ವಿಧಾನಸಭೆಯ 175 ಕ್ಷೇತ್ರಗಳು ಹಾಗೂ ಲೋಕಸಭೆಯ 25 ಕ್ಷೇತ್ರಗಳಿಗೆ ಮುಂದಿನ ತಿಂಗಳ
11ರಂದು ನಡೆಯಲಿರುವ ಚುನಾವಣೆಗೆ ಪ್ರಮುಖ ವಿರೋಧಪಕ್ಷವಾದ ವೈ.ಎಸ್.ಆರ್. ಕಾಂಗ್ರೆಸ್ ಇಂದು ತನ್ನ
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದಿಂದ ಇಬ್ಬರು ಆಯ್ಕೆಯಾಗಿದ್ದರು.
ನೆಲ್ಲೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಮೇಕಪಾಟಿ, ರಾಜಮೋಹನ್ ರೆಡ್ಡಿ, ಮತ್ತು ಆಂಗೋಲಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ವೈ.ವಿ.
ಸುಬ್ಬಾರೆಡ್ಡಿ ಅವರಿಗೆ ಟಿಕೆಟ್ ನಿರಾಕರಿಸಿದ್ದಾರೆ. ತಿರುಪತಿ ಕ್ಷೇತ್ರದ ಸಂಸದ ವರಪ್ರಸಾದ್, ಗುಡೂರು ವಿಧಾನಸಭಾ
ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ.
ಇತ್ತೀಚೆಗೆ ವೈ.ಎಸ್.ಆರ್. ಕಾಂಗ್ರೆಸ್ ಸೇರಿದ ಟಿಡಿಪಿ ಶಾಸಕ ಮುದುಗುಲ ವೇಣುಗೋಪಾಲರೆಡ್ಡಿ ಅವರಿಗೆ
ಗುಂಟೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ.
ನಿನ್ನೆ ಸಂಜೆ ಮಾಜಿ ಸಂಸದೆ ವಂಗಗೀತಾ ವೈ.ಎಸ್.ಆರ್.ಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಕಾಕಿನಾಡ ಕ್ಷೇತ್ರದಿಂದ
ಟಿಕೆಟ್ ನೀಡಲಾಗಿದೆ. ವಿಧಾನಪರಿಷತ್ ಸದಸ್ಯ ಎಂ.ಎಸ್.ರೆಡ್ಡಿ ಅವರಿಗೆ ಆಂಗೋಲಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್
ನೀಡಲಾಗಿದ್ದು, ವೈ.ಎಸ್.ಆರ್. ಕಾಂಗ್ರೆಸ್‍ನ ಮುಖ್ಯಸ್ಥ ವೈ.ಎಸ್.ಜಗನ್‍ಮೋಹನ್ ರೆಡ್ಡಿ ಹಿದುಪುಲಾಪಾಯದಿಂದ
ಕಣಕ್ಕಿಳಿಯಲಿದ್ದಾರೆ.
*****************************
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಎಐಎಡಿಎಂಕೆ, ಬಿಜೆಪಿ ಮತ್ತು ಇತರೆ ಪಕ್ಷಗಳು
ಲೋಕಸಭಾ ಸ್ಥಾನ ಹಂಚಿಕೆ ಮಾಡಿಕೊಂಡಿವೆ.
ಪ್ರಮುಖ ಪಾಲುದಾರ ಮಿತ್ರಪಕ್ಷವಾದ ಎಐಎಡಿಎಂಕೆ, ಚೆನ್ನೈ ದಕ್ಷಿಣ, ತಿರುಪ್ಪುರ್, ಮಧುರೈ ಸೇರಿದಂತೆ 17
ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಚೆನ್ನೈ ದಕ್ಷಿಣ, ಧರ್ಮಪುರಿ ಸೇರಿದಂತೆ 7 ಕ್ಷೇತ್ರಗಳಲ್ಲಿ ಪಿಎಂಕೆ ಸ್ಪರ್ಧಿಸಲಿದೆ. ಬಿಜೆಪಿ
ಕನ್ಯಾಕುಮಾರಿ, ಕೊಯಮತ್ತೂರು, ಶಿವಗಂಗಾ, ರಾಮನಾಥಪುರಂ ಮತ್ತು ತೂತುಕುಡಿ ಕ್ಷೇತ್ರಗಳಿಂದ ಸ್ಪರ್ಧಿಸಲಿದೆ.
ವಿಜಯಕಾಂತ್ ನೇತೃತ್ವದ ಡಿಎಂಡಿಕೆಗೆ ಚೆನ್ನೈ ಉತ್ತರ ತಿರುಚ್ಚಿನಾಪಳ್ಳಿ ಹಾಗೂ ಇನ್ನಿತರ ಎರಡು ಕ್ಷೇತ್ರಗಳನ್ನು
ಬಿಟ್ಟುಕೊಡಲಾಗಿದೆ. ಇನ್ನುಳಿದ 4 ಸಣ್ಣ ಪಕ್ಷಗಳು ಬಹುತೇಕ ಎಐಎಡಿಎಂಕೆ ಚಿನ್ಹೆಯಡಿ ಸ್ಪರ್ಧೆ ಮಾಡುವ ಸಾಧ್ಯತೆಯಿದೆ.
18 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ ಮುಖಾಮುಖಿಯಾಗಲಿದೆ.
*****************************
ಕರ್ನಾಟಕದ ಬಿಜೆಪಿ ಘಟಕ 28 ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕೋರ್ ಕಮಿಟಿ ಸಭೆಯಲ್ಲಿ
ಆಖೈರುಗೊಳಿಸಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಮುರುಳೀಧರ ರಾವ್,
ದಕ್ಷಿಣ ಭಾರತದ ಉಸ್ತುವಾರಿ ಬಿ.ಎಲ್.ಸಂತೋಷ್ ಸೇರಿದಂತೆ ಇನ್ನಿತರ ಹಿರಿಯ ನಾಯಕರ ಸಮ್ಮುಖದಲ್ಲಿ
ಬೆಂಗಳೂರಿನಲ್ಲಿಂದು ನಡೆದ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದರು.
ಸಭೆಯ ಬಳಿಕ ವಿವರ ನೀಡಿದ ಶಾಸಕ ಅರವಿಂದ್ ಲಿಂಬಾವಳಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಕೇಂದ್ರೀಯ
ಚುನಾವಣೆ ಸಮಿತಿಗೆ ಸಲ್ಲಿಸಲಿದ್ದು, ಅಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ
ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ, ಮಾಜಿ ಸಚಿವ ಹಾಗೂ ಚಿತ್ರನಟ ದಿವಂಗತ ಅಂಬರೀಶ್ ಅವರ ಪತ್ನಿ
ಸುಮಲತಾ ಅವರ ಮುಂದಿನ ನಡೆಯನ್ನು ನೋಡಿ ಪಕ್ಷ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ ಎಂದರು.