ಬಿಜೆಪಿ ಸೋಲಿಸಲು ಕಾಂಗ್ರೆಸ್ ಜತೆ ಮೈತ್ರಿ ಅಗತ್ಯವಿಲ್ಲ: ಮಾಯಾವತಿ

ಲಕ್ನೋ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಜತೆ ಮೈತ್ರಿಯ ಅವಶ್ಯಕತೆ ಇಲ್ಲ ಎಂದು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಎಸ್‍ಪಿ-ಬಿಎಸ್‍ಪಿ ಮೈತ್ರಿಯಿಂದಲೇ ಬಿಜೆಪಿ ಸೋಲಿಸಬಹುದು, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಮಾಯಾವತಿ ಕಾಂಗ್ರೆಸ್ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 7 ಕ್ಷೇತ್ರಗಳನ್ನು ಹೊರತುಪಡಿಸಿ ಎಲ್ಲ ಕಡೆಯೂ ಸ್ಪರ್ಧೆ ಮಾಡಲಿದೆ ಎಂದು ಕಾಂಗ್ರೆಸ್ ತಿಳಿಸಿತ್ತು. ಸಮಾಜವಾದಿ ಪಾರ್ಟಿ, ಬಹುಜನ ಸಮಾಜವಾದಿ ಪಾರ್ಟಿ ಮತ್ತು ರಾಷ್ಟ್ರೀಯ ಲೋಕ್ ದಳ ಪಕ್ಷಗಳ ಮುಖಂಡರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಮಾಯಾವತಿ, ಉತ್ತರ ಪ್ರದೇಶದ 80 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲು ಕಾಂಗ್ರೆಸ್ ಮುಕ್ತವಾಗಿದೆ. ನಮ್ಮ ಮೈತ್ರಿಯೊಂದೇ ಬಿಜೆಪಿಯನ್ನು ಸೋಲಿಸುವ ಸಾಮಾರ್ಥ್ಯವನ್ನು ಹೊಂದಿದ್ದು, ಕಾಂಗ್ರೆಸ್ ಅವಶ್ಯಕತೆ ನಮಗಿಲ್ಲ ಎಂದರು.

7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸದಂತೆ ನಾವು ಯಾವುದೇ ಒತ್ತಡ ಹಾಕಿಲ್ಲ. ಈ ಕುರಿತು ಹರಡುತ್ತಿರುವ ಸುದ್ದಿಗಳು ಸುಳ್ಳು. ದೇಶದಲ್ಲಿ ಎಲ್ಲಿಯೂ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಲ್ಲ ಎಂದು ಮಾಯಾವತಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ