ಬೆಂಗಳೂರು, ಮಾ.18-ಪ್ರಶಸ್ತಿ ಕೊಟ್ಟಿದ್ದಕ್ಕೆ ಸಂತೋಷ ಹೆಚ್ಚಾಯ್ತು. ಅದೇ ಖುಷಿಯಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ಆಶೀರ್ವಾದ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಕೈ ಮುಗಿದು ನಮಸ್ಕಾರ ಮಾಡಿ ಬಂದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಸಾಲುಮರದ ತಿಮ್ಮಕ್ಕ ಮುಗ್ಧ ಮಾತುಗಳನ್ನಾಡಿದರು.
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ರಾಷ್ಟ್ರಪತಿ ಅವರ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ ಪೋಟೊ ದೇಶದಲ್ಲಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ವೈರಲ್ಲಾಗಿ ಹೆಚ್ಚು ಪ್ರಚಾರ ಪಡೆದಿದೆ. ಖುದ್ದು ರಾಷ್ಟ್ರಪತಿ ಅವರೇ ಇದನ್ನು ಸಂತೋಷದಿಂದ ಹಂಚಿಕೊಂಡಿದ್ದಾರೆ.
ಇಂದು ಬೆಳಗ್ಗೆ ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಸಾಲುಮರದ ತಿಮ್ಮಕ್ಕ ಅವರು, ಆ ಕ್ಷಣದಲ್ಲಿ ನನಗೆ ಸಂತೋಷ ಹೆಚ್ಚಾಗಿತ್ತು. ಪ್ರಶಸ್ತಿ ಸ್ವೀಕರಿಸಿದವರ ಸಾಲಿನಲ್ಲಿ ನಾನು ಕೊನೆಯವಳಾಗಿದ್ದೆ. ತುಂಬಾ ಖುಷಿಯಾಯಿತು. ಅದೇ ಖುಷಿಯಲ್ಲಿ ಅವರನ್ನು ಆಶೀರ್ವದಿಸಿದೆ. ಅಲ್ಲಿಂದ ಬಂದಾಗ ಪ್ರಧಾನಿ ಮೋದಿ ಸಿಕ್ಕರು ಅವರಿಗೂ ಕೈ ಮುಗಿದು ನಮಸ್ಕರಿಸಿದೆ. ದೇಶದ ಜನರಿಗೆಲ್ಲಾ ಒಳ್ಳೆಯದಾಗಲಿ ಎಂದು ಹೇಳಿದರು.
ಪದ್ಮಶ್ರೀ ಪ್ರಶಸ್ತಿ ಪಡೆದ ಸಾಲುಮರದ ತಿಮ್ಮಕ್ಕ ಅವರನ್ನು ಸದಾಶಿವನಗರದಲ್ಲಿ ತಮ್ಮ ಕ್ವಾಟ್ರಸ್ಗೆ ಆಹ್ವಾನಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಅಭಿನಂದಿಸಿದರು. ತಿಮ್ಮಕ್ಕ ಅವರಿಗೆ ಪ್ರಶಸ್ತಿ ನೀಡಿದ್ದಕ್ಕಾಗಿ ಪರಮೇಶ್ವರ್ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಮಾಗಡಿ ತಾಲ್ಲೂಕಿನ ಸಣ್ಣ ಹಳ್ಳಿಯಿಂದ ಬಂದ ತಿಮ್ಮಕ್ಕ ಅವರು ತಮಗೆ ಮಕ್ಕಳು ಆಗಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಮರಗಳನ್ನು ಬೆಳೆಸುವ ಮೂಲಕ ಅದರಲ್ಲಿ ತಮ್ಮ ನೋವನ್ನು ಮರೆತರು. ನಾಲ್ಕು ಕಿ.ಮೀ. ಉದ್ದಕ್ಕೂ ಸಾಲು ಮರಗಳನ್ನು ಬೆಳೆಸಿ ವಿಶ್ವಕ್ಕೆ ಮಾದರಿಯಾಗಿದ್ದಾರೆ.
ಪರಿಸರ ನಾಶವಾಗುತ್ತಿರುವ ಈ ಸಂದರ್ಭದಲ್ಲಿ ತಿಮ್ಮಕ್ಕ ಅವರ ನಿಸ್ವಾರ್ಥ ಸೇವೆ ನಮ್ಮೆಲ್ಲರಿಗೂ ಮಾದರಿ.ಇದನ್ನು ಗುರುತಿಸಿದ ಕೇಂದ್ರ ಸರ್ಕಾರಕ್ಕೆ ಮತ್ತು ಪ್ರಶಸ್ತಿ ಸ್ವೀಕರಿಸಿದ ತಿಮ್ಮಕ್ಕ ಅವರಿಗೆ ಇಡೀ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ತಿಮ್ಮಕ್ಕ ಅವರಿಗೆ ಅನೇಕ ಪ್ರಶಸ್ತಿಗಳು ಸಿಕ್ಕಿವೆ. ಅವೆಲ್ಲವೂ ಪರಿಸರ ಜಾಗೃತಿಯ ಸಂಕೇತಗಳಾಗಿವೆ ಎಂದು ಪರಮೇಶ್ವರ್ ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ತಿಮ್ಮಕ್ಕ ಅವರ ಸಾಕು ಪುತ್ರ ಉಮೇಶ್, ಅಜ್ಜಿಯ ಕಷ್ಟಕಾಲಕ್ಕೆ ಪರಮೇಶ್ವರ್ ಅವರು ಆಸರೆಯಾಗಿದ್ದರೆ. ಯಾವುದೇ ಪ್ರಚಾರ ಬಯಸದೆ ಅಜ್ಜಿಯ ಜೀವನ ನಿರ್ವಹಣೆ, ಆರೋಗ್ಯ ವೆಚ್ಚ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಅವರು ಇಲ್ಲದೇ ಇದ್ದಿದ್ದರೆ ಅಜ್ಜಿ ಇಂದು ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ದೆಹಲಿಯಲ್ಲಿ ಅಜ್ಜಿ ಪ್ರಶಸ್ತಿ ಸ್ವೀಕರಿಸಿದ ನಂತರ ಹೇಳಿದ ಮೊದಲ ಮಾತು ಪರಮೇಶ್ವರಪ್ಪ ಅವರನ್ನು ಭೇಟಿ ಮಾಡಬೇಕು. ಅವರ ಮನೆಗೆ ಕರೆದುಕೊಂಡು ಹೋಗು ಎಂದು. ಅದರ ಬೆನ್ನ ಹಿಂದೆಯೇ ಪರಮೇಶ್ವರ್ ಅವರು ಪೋನ್ ಮಾಡಿ ಮನೆಗೆ ಬರುವಂತೆ ಆಹ್ವಾನನೀಡಿದರು. ಅವರಿಬ್ಬರ ನಡುವಿನ ಸಂಬಂಧ ಅವಿನಾಭಾವದಿಂದ ಕೂಡಿದೆ ಎಂದು ಹೇಳಿದರು.