ಪ್ರಧಾನಿ ಚರ್ಚೆಯಲ್ಲಿ ಅಭಿವೃದ್ಧಿಯನ್ನು ಸಾಬೀತುಪಡಿಸಿದರೆ-ಸೇವಕನಾಗಿ ಕೆಲಸ ಮಾಡುತ್ತೇನೆ-ಬಿ.ಕೆ.ಹರಿಪ್ರಸಾದ್

ಕಲ್ಬುರ್ಗಿ, ಮಾ.18- ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ತಾಕತ್ತಿದ್ದರೆ ಅಭಿವೃದ್ಧಿ ವಿಷಯದಲ್ಲಿ ನಮ್ಮ ರಾಹುಲ್ ಗಾಂಧಿಯೊಂದಿಗೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ. ಚರ್ಚೆಯಲ್ಲಿ ನಿಮ್ಮ ಅಭಿವೃದ್ಧಿಯನ್ನು ಸಾಬೀತು ಪಡಿಸಿದರೆ ನಾನು ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದರು.

ಕಲ್ಬುರ್ಗಿಯ ಎನ್.ವಿ.ಮೈದಾನದಲ್ಲಿ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ತಾಕತ್ತಿದ್ದರೆ ಮೋದಿ ಅವರು ಕನಿಷ್ಠ ಒಂದು ಪತ್ರಿಕಾಗೋಷ್ಠಿಯನ್ನಾದರೂ ಎದುರಿಸಲಿ ಎಂದು ಸವಾಲೆಸೆದರು.

ದೇಶಾದ್ಯಂತ ನಡೆದ ದಲಿತರ, ಅಲ್ಪಸಂಖ್ಯಾತರ ಕೊಲೆ ಪ್ರಕರಣಗಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಕೊಲೆ ಪ್ರಕರಣಗಳನ್ನು ಪ್ರಸ್ತಾಪಿಸಿ ಬಿಜೆಪಿ ನಾಯಕರು ಸಂಸ್ಕøತಿ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡಿದ್ದಾರೆ ಎಂದು ಆರೋಪಿಸಿದರು.

ಚೌಕಿದಾರ್ ಕಳ್ಳನಾದರೆ ಯಾರಿಗೆ ರಕ್ಷಣೆ ಸಿಗುತ್ತದೆ. ದೇಶದಲ್ಲಿ ಕಳ್ಳನ ಕೈಗೆ ಬೀಗದ ಕೀ ಕೊಟ್ಟಂತಾಗಿದೆ. ಭ್ರಷ್ಟರ ಅಂಗಡಿಗಳನ್ನು ಬಂದ್ ಮಾಡಿಸುವುದಾಗಿ ಮೋದಿ ಕಲ್ಬುರ್ಗಿಯಲ್ಲಿ ನಿಂತು ಭಾಷಣ ಮಾಡಿದ್ದಾರೆ. ಆದರೆ ಅವರ ಸರ್ಕಾರದ ಅವಧಿಯಲ್ಲಿ ಕಳ್ಳರೆಲ್ಲಾ ಅಂಗಡಿ ತೆಗೆದುಕೊಂಡು ಕುಳಿತಿದ್ದಾರೆ ಎಂದು ಟೀಕಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಕಲ್ಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ, ಯುಪಿಎ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಮುಖ ಹುದ್ದೆ ಅಲಂಕರಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ರಾಹುಲ್‍ಗಾಂಧಿ ನೇತೃತ್ವದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ. ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಆಗಿವೆ. ಕಲಬುರ್ಗಿ ಭಾಗದಲ್ಲಿ ನೀರಾವರಿ ಯೋಜನೆಗಳಾದವು, ವಿಮಾನ ನಿಲ್ದಾಣ ವಾಗುತ್ತಿದೆ. ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಯೇ ಆಗಿದೆ.

ಬಿಜೆಪಿಯವರು ಏನಾದರೂ ಮಾಡಿದ್ದಾರೆಯೇ ? ಒಂದು ಸುಳ್ಳನ್ನು ಹತ್ತು ಸಲ ಹೇಳಿ ನಿಜ ಎಂದು ನಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪ ಅಮರ್ ನಾಥ್ ಮಾತನಾಡಿ, ಜಿಎಸ್‍ಟಿ ಮೂಲಕ ಕೇಂದ್ರ ಸರ್ಕಾರ ತಿನ್ನುವ ಅನ್ನ, ಬಟ್ಟೆ ಮೇಲಷ್ಟೆ ಅಲ್ಲ, ಸ್ಯಾನಿಟರಿ ಪ್ಯಾಡ್ ಮೇಲೂ ಶೇ.18ರಷ್ಟು ಟ್ಯಾಕ್ಸ್ ಹಾಕಿ ಮಹಿಳೆಯರನ್ನು ಶೋಷಣೆ ಮಾಡಿತ್ತು. ದೇಶಾದ್ಯಂತ ಹೋರಾಟ ಹೆಚ್ಚಾದ ನಂತರ ಅದನ್ನು ಕೈ ಬಿಡಲಾಗಿದೆ. ಬಿಜೆಪಿಯಿಂದ ಹೆಣ್ಣು ಮಕ್ಕಳಿಗೆ ಬರೀ ಅನ್ಯಾಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ನೇತೃತ್ವದ ಸರ್ಕಾರ ಬೇಟಿ ಬಚಾವೋ- ಬೇಟಿ ಪಡಾವೋ ಯೋಜನೆ ಅನುದಾನವನ್ನು ಮೋದಿ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಉನ್ನಾವೋದಲ್ಲಿ ಬಿಜೆಪಿ ಶಾಸಕ ಅತ್ಯಾಚಾರ ಮಾಡಿದ್ದಾನೆ, ಅದಕ್ಕೆ ಬಿಜೆಪಿ ಉತ್ತರ ನೀಡಿಲ್ಲ. ಬಿಜೆಪಿಯಿಂದ ಮಹಿಳೆಯರ ರಕ್ಷಣೆ ಸಾಧ್ಯವಿಲ್ಲ ಎಂದರು.

ಗ್ಯಾಸ್ ಬೆಲೆ 300 ರಿಂದ ಒಂದು ಸಾವಿರ ರೂಪಾಯಿಗೆ ಹೆಚ್ಚಾಗಿದೆ. ಉಜಾಲ ಯೋಜನೆಯಲ್ಲಿ ಹೆಣ್ಣು ಮಕ್ಕಳಿಗೆ ಅನುಕೂಲವಾಗಿಲ್ಲ. ಮೊದಲ ಸಿಲಿಂಡರ್ ಉಚಿತ ಎನ್ನುತ್ತಾರೆ, ಎರಡನೆ ಸಿಲಿಂಡರ್‍ಗೆ ದುಡ್ಡು ನೀಡಬೇಕು. ಇದು ಮೋಸ ಅಲ್ಲವೇ. ಅಧಿಕಾರಕ್ಕೆ ಬಂದ 100 ದಿನದಲ್ಲಿ ಪೆಟ್ರೋಲ್ ಬೆಲೆಯನ್ನು 40 ರೂ.ಗೆ ಇಳಿಯುವಂತೆ ಮಾಡುವುದಾಗಿ ಭರವಸೆ ನೀಡಿದ್ದರು, ಅದು ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಶಾಸಕಿ ಫಾತೀಮಾ ಮಾತನಾಡಿ, ಕಳೆದ ಭಾರಿ ಖರ್ಗೆ ಅವರನ್ನು 75 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದೀರಾ, ಈ ಬಾರಿ ಎರಡು ಲಕ್ಷಗಳ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಶಾಸಕ ನಾರಾಯಣ್ ಮಾತನಾಡಿ, ಮಹಾತ್ಮಗಾಂಧಿ ಕನಸಿನಂತೆ ದಲಿತರು ಒಂದು ದಿನ ದೇಶದ ಪ್ರಧಾನಿಯಾಗಬೇಕು, ಮಲ್ಲಿಕಾರ್ಜುನ ಖರ್ಗೆ ಒಂದಲ್ಲ ಒಂದು ದಿನ ಪ್ರಧಾನಿಯಾಗುತ್ತಾರೆ. ಖರ್ಗೆ ಸಂಸತ್‍ನಲ್ಲಿದ್ದರೆ ನಮ್ಮ ಅಂಗಡಿ ನಡೆಯಲ್ಲ ಎಂದು ಮೋದಿ ಅವರು ಇಲ್ಲಿಗೆ ಬಂದು ಪ್ರಚಾರ ನಡೆಸಿಹೋಗಿದ್ದಾರೆ ಎಂದು ಲೇವಡಿ ಮಾಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಸಚಿವರಾದ ಎಂ.ಬಿ.ಪಾಟೀಲ್, ಬಸವರಾಜ್ ಪಾಟೀಲ್, ರಹಿಂಖಾನ್, ಪ್ರಿಯಾಂಕ್ ಖರ್ಗೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಶಾಸಕರಾದ ಅಜೇಯ್ ಸಿಂಗ್, ಸಂಸದರಾದ ಕೆ.ಎಚ್.ಮುನಿಯಪ್ಪ, ಬಿ.ವಿ.ನಾಯಕ್, ವಿ.ಎಸ್.ಉಗ್ರಪ್ಪ, ಎಐಸಿಸಿ ಕಾರ್ಯದರ್ಶಿ ಶೈಲಜಾ ನಾಥ್, ರಾಜ್ಯಸಭಾಸದಸ್ಯರಾದ ನಾಸೀರ್ ಹುಸೇನ್, ಎಸಿಸಿ ಮುಖಂಡರಾದ ಹರಿ ಪ್ರಸಾದ್, ಮುಖಂಡರಾದ ಶರಣ ಪ್ರಕಾಶ್ ಪಾಟೀಲ್, ಅಲ್ಲಮ ಪ್ರಭು ಪಾಟೀಲ್, ಲಕ್ಷ್ಮೀನಾರಾಯಣ್, ಕೋಲಿ ಸಮಾಜದ ಮುಖಂಡರಾದ ತಿಪ್ಪಣ್ಣಪ್ಪ ಕಮ್ಮಕನ್ನೂರು ಮತ್ತಿತರರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ