ಪಣಜಿ: ಮನೋಹರ್ ಪರಿಕ್ಕರ್ ಅವರ ನಿಧನದಿಂದ ತೆರವಾಗಿರುವ ಗೋವಾ ಸಿಎಂ ಹುದ್ದೆಗೆ ಇಂದು ಸಂಜೆ ವೇಳೆಗೆ ನೂತನ ಮುಖ್ಯಮಂತ್ರಿ ಪ್ರಮಾನ ವಚನ ಸ್ವೀಕರಿಸಲಿದ್ದಾರೆ ಎಂದು ಗೋವಾದ ಬಿಜೆಪಿ ರಾಜ್ಯಾಧ್ಯಕ್ಷ ವಿನಯ್ ತೆಂಡುಲ್ಕರ್ ತಿಳಿಸಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಬಿಜೆಪಿ ಹಿರಿಯ ನಾಯಕರು ಸಭೆ ನಡೆಸಿದ್ದು, ನೂತನ ಮುಖ್ಯಮಂತ್ರಿ ಆಯ್ಕೆ ಬಹುತೇಕ ಅಂತಿಮಗೊಳಿಸಿದ್ದಾರೆ. ಇಂದು ಮಧ್ಯಾಹ್ನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಘೋಷಿಸಲಿದ್ದಾರೆ. ನೂತನ ಮುಖ್ಯಮಂತ್ರಿ ಇಂದು ಸಂಜೆಯೊಳಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತೆಂಡುಲ್ಕರ್ ತಿಳಿಸಿದರು.
ಗೋವಾ ವಿಧಾನಸಭೆ ಸ್ಪೀಕರ್ ಪ್ರಮೋದ್ ಸಾವಂತ್, ಸುದಿನ್ ಧಾವಲೀಕರ್ ಮತ್ತು ವಿಶ್ವಜೀತ್ ರಾಣೆ ಅವರು ಮುಖ್ಯಮಂತ್ರಿ ರೇಸ್ನಲ್ಲಿದ್ಧಾರೆ. ಪ್ರಮೋದ್ ಸಾವಂತ್ ನೂತನ ಸಿಎಂ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಗೋವಾ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಜತೆಗೆ 14 ಶಾಸಕರಿದ್ದು ನಮಗೆ ಬಹುಮತವಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.