ಮೈಸೂರು,ಮಾ.16-ಲೋಕಸಭಾ ಚುನಾವಣೆ ಸಂಬಂಧ ಕ್ಷೇತ್ರಕ್ಕಾಗಿ ಸೀಟು ಹಂಚಿಕೆಗೆ ಇಷ್ಟು ದಿನ ಕಾಂಗ್ರೆಸ್-ಜೆಡಿಎಸ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಆದರೆ ಈಗ ಕ್ಷೇತ್ರ ನಿರ್ಣಯದ ನಂತರ ಮೈಸೂರಿನಲ್ಲಿ ಶೀತಲ ಸಮರ ಏರ್ಪಟ್ಟಿದೆ.
ಮೈಸೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡಬಾರದೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟು ಹಿಡಿದು ಉಳಿಸಿಕೊಂಡಿದ್ದಾರೆ. ಆದರೆ ಈಗ ಇದು ಬೇರೆ ತಿರುವು ಪಡೆದುಕೊಳ್ಳುತ್ತಿದೆ.
ಕಾಂಗ್ರೆಸ್ ತೆಕ್ಕೆಗೆ ಮೈಸೂರು ದಕ್ಕಿದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವೆ ಶೀತಲ ಸಮರ ಆರಂಭವಾಗಿದೆ.
ಪ್ರವಾಸೋದ್ಯಮ ಖಾತೆ ಸಚಿವ ಸಾ.ರಾ.ಮಹೇಶ್ ಅವರು ಮಾತನಾಡಿ, ಮಂಡ್ಯದಲ್ಲಿ ನೀವು ನಮಗೆ ಕೈ ಕೊಟ್ಟರೆ ಮೈಸೂರಿನಲ್ಲಿ ನಾವು ನಿಮಗೆ ಕೈ ಕೊಡುತ್ತೇವೆ ಎಂದು ಹೇಳಿರುವ ಹೇಳಿಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವಂತಾಗಿದೆ.
ದೋಸ್ತಿಗಳ ನಡುವೆ ಈ ಹೇಳಿಕೆ ತೀವ್ರ ಸಂಚಲನ ಉಂಟು ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರ ನಡುವೆ ಈ ಹೇಳಿಕೆ ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಟ್ಟಿದೆ.
ಸಾ.ರಾ.ಮಹೇಶ್ ನೀಡಿರುವ ಹೇಳಿಕೆ ಗಮನಿಸಿದರೆ ದೋಸ್ತಿಗಳ ನಡುವೆಯೇ ಬಿರುಕು ಉಂಟಾಗುವ ಪರಿಸ್ಥಿತಿ ಇದೆ. ಹಾಗಾಗಿ ಇವರ ಹೇಳಿಕೆ ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರಲಿದೆ ಎಂಬುದು ಕಾದು ನೋಡಬೇಕಿದೆ.
ಕಾಂಗ್ರೆಸ್ ನಾಯಕರ್ಯಾರು ಜೆಡಿಎಸ್ವಿರುದ್ದ ನಿಲ್ಲುತ್ತೇವೆಂದು ಎಲ್ಲೂ ಹೇಳಿಲ್ಲ. ಜೆಡಿಎಸ್ ಅಭ್ಯರ್ಥಿಯನ್ನು ವಿರೋಧಿಸುತ್ತೇವೆ ಎಂದು ಸಹ ಹೇಳಿಲ್ಲ. ಆದರೆ ಇದೀಗ ಸಾ.ರಾ.ಮಹೇಶ್ ಹೇಳಿಕೆಯಿಂದಾಗಿ ಕಾಂಗ್ರೆಸ್-ಜೆಡಿಎಸ್ ನಾಯಕರಲ್ಲಿ ಪ್ರಭಾವ ಬೀರುವುದಂತೂ ಖಚಿತ.
ಒಟ್ಟಾರೆ ಸಾ.ರಾ.ಮಹೇಶ್ ಅವರ ಹೇಳಿಕೆಯನ್ನು ಜೆಡಿಎಸ್ ನಾಯಕರು ಸಮರ್ಥಿಸಿಕೊಳ್ಳುತ್ತಾರೋ ಅಥವಾ ವಿರೋಧಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.