
ಮಧುಗಿರಿ, ಮಾ.16- ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪರ್ಧಿಸಿದರೂ ಕೂಡ ಬಿಜೆಪಿ ಗೆಲುವು ಖಚಿತ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಪಟ್ಟಣದ ದಂಡಿನ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ರಕ್ಷಣೆ ಹಾಗೂ ದೇಶದ ಅಭಿವೃದ್ಧಿಗೆ ಸತತವಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿ ಅವರ ಕೊಡುಗೆ ಅಪಾರ. ಸಮರ್ಥ ನಾಯಕತ್ವಕ್ಕೆ ಈ ಬಾರಿಯೂ ಭಾರತೀಯರೆಲ್ಲರೂ ಕೈ ಜೋಡಿಸಿದ್ದು, ಮತ್ತೊಮ್ಮೆ ಮೋದಿಯವರು ಪ್ರಧಾನ ಮಂತ್ರಿಯಾಗುವುದು ಖಚಿತ ಎಂದರು.
ಮೋದಿ ಕೈಗೊಂಡ ಅಭಿವೃದ್ಧಿಯೇ ಬಿಜೆಪಿಗೆ ಶ್ರೀ ರಕ್ಷೆಯಾಗಿರುವುದರಿಂದ ಸ್ಪರ್ಧಿಗಳು ಯಾರೇ ಆದರೂ ಮತದಾರನ ಒಲವು ಬಿಜೆಪಿಗೆ ಇದೆ ಎಂದರು.
ತುಮಕೂರಿನ ಜನತೆಗೆ ಹೇಮಾವತಿ ನೀರಿನ ವಿಚಾರದಲ್ಲಿ ದೇವೇಗೌಡರು ದ್ರೋಹ ಬಗೆದಿರುವುದರಿಂದ ಕೆಲವು ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಜನರು ಪರದಾಡುವಂತಾಗಿದ್ದು, ಈ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಜಿಲ್ಲೆಯಲ್ಲಿ ಹಿಂದುಳಿದ, ಬಡವರ್ಗಗಳ ಧ್ವನಿಯಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ತನ್ನದೇ ಆದ ಮತಬ್ಯಾಂಕನ್ನು ಹೊಂದಿರುವ ವ್ಯಕ್ತಿಯಾಗಿದ್ದು, ಅವರು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ ಎಂದರು.
ನಿವೃತ್ತ ದೈಹಿಕ ಶಿಕ್ಷಕ ಶಿವಕುಮಾರ್, ಮುಖಂಡರಾದ ಶಿವಾನಂದ, ಜಯದೇವಪ್ಪ, ಮಂಜುನಾಥ್, ಬಸವರಾಜು, ಮಲ್ಲಿಕಾರ್ಜುನ್, ಉಮಾಶಂಕರ್, ಪರಮೇಶ್, ಕುಮಾರ್ ಚಿಕ್ಕಮಾಲೂರು ಜಗದೀಶ್ ಹಾಗೂ ಮುಂತಾದವರು ಇದ್ದರು.