ವಿಲ್ಲಿಂಗ್ಟನ್: ನ್ಯೂಜಿಲೆಂಡ್ನ ಕ್ರೈಸ್ಟ್ಚರ್ಚ್ ನಗರದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಇಲ್ಲಿನ ಮಸೀದಿಯೊಳಗೆ ನುಗ್ಗಿದ ವ್ಯಕ್ತಿ ಬಂದೂಕಿನಿಂದ ಮನಬಂದಂತೆ ಗುಂಡುಹಾರಿಸಿದ್ದು, ಸ್ಥಳದ್ಲಲೇ 30ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸಾವಿನ ಸಂಖ್ಯೆ ಇನ್ನೂ ನಿಖರವಾಗಿಲ್ಲ. ಪೊಲೀಸರು ಶೂಟೌಟ್ ನಡೆಸಿದ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಇನ್ನಷ್ಟು ಬಂದೂಕುಧಾರಿಗಳು ಮಸೀದಿಯೊಳಗೆ ಇರಬಹುದೆಂದು ಶಂಕಿಸಲಾಗಿದೆ.
ಸಾವಿನ ಸಂಖ್ಯೆ ನಿಖರವಾಗಿಲ್ಲ. ಆದರೆ ಘಟನೆ ನಡೆದಿರುವುದು ಖಚಿತ. ಇದು ನ್ಯೂಜಿಲೆಂಡ್ ಇತಿಹಾಸದಲ್ಲೇ ಕರಾಳದಿನ ಎಂದು ಪ್ರಧಾನಿ ಜಸಿಂದ ಅರ್ಡೆನ್ ಅವರು ತಿಳಿಸಿದ್ದಾರೆ.
ನ್ಯೂಜಿಲೆಂಡ್ ಪೊಲೀಸ್ ಆಯುಕ್ತರಾದ ಮೈಕ್ ಬುಶ್ ಅವರು ಘಟನೆ ಕುರಿತು ಒಂದು ವಿಡಿಯೊ ಪ್ರಕಟಿಸಿದ್ದು, ಸಾರ್ವಜನಿಕರು ಹೆದರದಂತೆ ಧೈರ್ಯ ಹೇಳಿದ್ದಾರೆ.
ಈವರೆಗೆ ಒಬ್ಬ ಬಂದೂಕುಧಾರಿಯನ್ನು ವಶಕ್ಕೆ ಪಡೆಯಲಾಗಿದೆ. ಮಸೀದಿಯೊಳಗೆ ಇನ್ನೂ ಎಷ್ಟು ಜನ ದುಷ್ಕರ್ಮಿಗಳಿದ್ದಾರೋ ಗೊತ್ತಾಗುತ್ತಿಲ್ಲ. ಪರಿಸ್ಥಿತಿ ತಹಬದಿಗೆ ತರಲು ಯತ್ನಿಸುತ್ತಿದ್ದೇವೆ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.
ನ್ಯೂಜಿಲೆಂಡ್ ಸ್ಥಳೀಯ ಕಾಲಮಾನ ಗುರುವಾರ ಬೆಳಗ್ಗೆ 8.40ಕ್ಕೆ ಘಟನೆ ನಡೆದಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಮನೆಯಿಂದ ಹೊರಬಾರದಂತೆ ತಿಳಿಸಿದ್ದೇವೆ ಎಂದು ಬುಶ್ ಹೇಳಿದ್ದಾರೆ.