ನಿಖಿಲ್ ಸ್ಪರ್ಧೆ ಬೆನ್ನಲ್ಲೇ ಮಂಡ್ಯದಲ್ಲಿ ಬೆಟ್ಟಿಂಗ್ ವಾರ್..!

ಮಂಡ್ಯ; ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದ್ದು, ಯಾರು ಗೆಲ್ತಾರೆ..? ಯಾರು ಸೋಲ್ತಾರೆ..? ಅನ್ನೋ ಲೆಕ್ಕಾಚಾರದ ಸಮರ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಹೌದು. ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಟ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಫೈನಲ್ ಆಗಿದೆ. ಈ ಬೆನ್ನಲ್ಲೇ ಚೇತನ್ ಗೌಡ ಹಾಗೂ ನಟೇಶ್ ಗೌಡ ಎಂಬಿಬ್ಬರ ಮಧ್ಯೆ 5 ಲಕ್ಷದ ಬೆಟ್ಟಿಂಗ್ ವಾರ್ ಆರಂಭವಾಗಿದೆ.

ಪೇಸ್ ಬುಕ್ ನಲ್ಲಿ ಚೇತನ್ ಆರ್ .ಗೌಡ, ನಿಖಿಲ್ ಸೋಲ್ತಾರೆ ಎಂದು ಪೋಸ್ಟ್ ಶೇರ್ ಮಾಡಿದ್ದರು. ಈ ಪೋಸ್ಟ್ ಗೆ 5 ಲಕ್ಷ ಬೆಟ್ ಕಟ್ತೀನಿ.. ನಿಖಿಲ್ ಗೆದ್ದೇ ಗೆಲ್ತಾರೆ. ಧಮ್ ಇದ್ದರೆ ಕಳಿಸು ಎಂದು ನಟೇಶ್ ಗೌಡ ಸವಾಲ್ ಹಾಕಿದ್ದಾರೆ.

ಇತ್ತ ಸುಮಲತಾ ಅಂಬರೀಶ್ ಕೂಡ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. “ಅಂಬರೀಶ್‍ರನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಮಂಡ್ಯದ ಪ್ರತಿಯೊಬ್ಬರು ಅಂಬರೀಶ್ ಬಂಧುಗಳು. ಏಕೆಂದರೆ ಅಂಬರೀಶ್‍ ಅವರಲ್ಲಿ ಇರುವ ಗುಣವೇ ಮಂಡ್ಯದ ಜನರಲ್ಲಿ ಇದೆ. ಮಂಡ್ಯದ ಮಣ್ಣಿನ ಗುಣದಲ್ಲಿ ಕಪಟವೇ ಇಲ್ಲ. ಸುಳ್ಳುಗಳಿಲ್ಲ. ಸಮಯಕ್ಕೆ ತಕ್ಕ ಹಾಗೆ ಮಾತನಾಡುವ ಜಾಯಮಾನ ಮಂಡ್ಯದ ಮಣ್ಣಿನಲ್ಲಿ ಇಲ್ಲ. ಮಂಡ್ಯದ ಮಣ್ಣು ಬರಿ ಮುಗ್ಧತೆಯಿಂದ ಕೂಡಿಲ್ಲ. ಅದು ಪ್ರಾಮಾಣಿಕತೆಯಿಂದಲೂ ಕೂಡಿದೆ. ಆ ಪ್ರಾಮಾಣಿಕತೆಗೆ ಮೋಸವೆಸಗುವ ರಾಜಕೀಯ ನನಗೆ ಬೇಕಾಗಿಲ್ಲ. ನನ್ನದು ಪ್ರಾಮಾಣಿಕವಾದ, ಅಂಬರೀಶ್ ಪಾಲಿಸುತ್ತಿದ್ದ ರಾಜಕೀಯ ಮಂಡ್ಯದ ಜನರ ರಾಜಕೀಯ” ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ಸುಮಲತಾ ಅವರು, “ಅಂಬರೀಶ್ ರಾಜಕೀಯ ನಾಟಕವಿಲ್ಲದ, ಸುಳ್ಳು ಭರವಸೆಗಳಿಲ್ಲದ, ಒಳಗೊಂದು ಹೊರಗೊಂದು ಮಾತುಗಳಿಲ್ಲದ, ಜನರಿಂದ ಕೆಲಸವಾಗಬೇಕು ಎಂದಾಗ ಜನರೆದುರು ಕಪಟ ನಾಟಕವಾಡಿ ಮೋಸಗೊಳಿಸದ, ನೇರಾನೇರ ಇದ್ದದ್ದು ಇದ್ದ ಹಾಗೆ ಹೇಳುವ ದಿಟ್ಟ ನಡೆಯ ರಾಜಕೀಯ ಅಂಬರೀಶ್ ರಾಜಕೀಯ. ಆ ರಾಜಕೀಯವೇ ಅತ್ಯುತ್ತಮ. ಅಂಬರೀಶ್ ರಾಜಕೀಯವೇ ನಮ್ಮದಾಗಲಿ ಎಂದು ಸುಮಲತಾ ಜೆಡಿಎಸ್ ವರಿಷ್ಠರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ