ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವಿನ ಸೀಟು ಹಂಚಿಕೆ ವಿಚಾರ ಅಂತಿಮವಾಗಿದೆ. ಎರಡು ಕ್ಷೇತ್ರಗಳಿಗಾಗಿ ಹಗ್ಗ-ಜಗ್ಗಾಟ ನಡೆಸಿದ್ದ ಕಾಂಗ್ರೆಸ್ ಕೊನೆಗೂ ಜೆಡಿಎಸ್‌ಗೆ 8 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಉಭಯ ಪಕ್ಷಗಳ ನಡುವೇ ಮೈಸೂರು-ಕೊಡಗು ಮತ್ತು ತುಮಕೂರು ಕ್ಷೇತ್ರಗಳಿಗೆ ಭಾರೀ ಪೈಪೋಟಿ ನಡೆದಿತ್ತು. ಇದೀಗ ಎಲ್ಲವೂ ಅಂತಿಮಗೊಂಡಿದ್ದು, ಕೊಡಗು ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡಿದೆ. ಅಲ್ಲದೇ ಹಾಲಿ ಕಾಂಗ್ರೆಸ್ ಸಂಸದರಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ನೀಡಲಾಗಿರುವುದು ಗಮನಾರ್ಹ.
ಇಲ್ಲಿದೆ ಜೆಡಿಎಸ್‌ಗೆ ಸಿಕ್ಕ ಕ್ಷೇತ್ರಗಳ ಪಟ್ಟಿ..
1. ಉತ್ತರ ಕನ್ನಡ
2.ಚಿಕ್ಕಮಗಳೂರು
3. ಶಿವಮೊಗ್ಗ
4. ತುಮಕೂರು
5. ಹಾಸನ
6. ಮಂಡ್ಯ
7. ಬೆಂಗಳೂರು ಉತ್ತರ
8. ವಿಜಯಪುರ
ಇಂದು ಕಾಂಗ್ರೆಸ್ ಜೆಡಿಎಸ್ ನಡುವೇ ಕೊಡಗು-ಮೈಸೂರು ಕ್ಷೇತ್ರಕ್ಕಾಗಿ ಭಾರೀ ಹಗ್ಗ-ಜಗ್ಗಾಟ ನಡೆದಿತ್ತು. ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಕ್ಷೇತ್ರವನ್ನು ಬಿಟ್ಟುಕೊಡಲು ಒಪ್ಪಿಗೆ ನೀಡಲಿಲ್ಲ. ಇದೀಗ ತುಮಕೂರು ಜತೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸ್ಪರ್ಧಿಸಲು ಗೃಹ ಸಚಿವ ಎಂ.ಬಿ. ಪಾಟೀಲ್ ಅವರ ವಿರೋಧದ ನಡುವೆಯೂ ವಿಜಯಪುರ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ನೀಡಲಾಗಿದೆ.
ಇನ್ನು, ಜೆಡಿಎಸ್-ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸದ್ಯದಲ್ಲೇ ಬಿಡಗುಗಡೆಯಾಗಲಿದೆ. ಇಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಅವರು ಕಾಂಗ್ರೆಸ್ ನಾಯಕರ ಜೊತೆ ಮತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಇದರಂತೆಯೇ ಉಭಯ ಪಕ್ಷಗಳ ನಡುವಿನ ಮಾತುಕತೆಯಲ್ಲಿ ಜೆಡಿಎಸ್‌ಗೆ 8 ಸ್ಥಾನಗಳನ್ನು ಬಿಟ್ಟಕೊಡಲಾಗಿದೆ.
ಹಾಸನ, ಮಂಡ್ಯ, ಬೆಂಗಳೂರು ಉತ್ತರ, ಶಿವಮೊಗ್ಗ, ಉತ್ತರ ಕನ್ನಡ, ವಿಜಯಪುರ ಜತೆಗೆ ಉಡುಪಿ-ಚಿಕ್ಕಮಗಳೂರು ಮತ್ತು ತುಮಕೂರು ಕ್ಷೇತ್ರಗಳು ಜೆಡಿಎಸ್‌ಗೆ ಸಿಕ್ಕಿವೆ. ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್ ಕೇಳಿರಲಿಲ್ಲ. ಆದರೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ಕಾರಣಕ್ಕೆ ಐವರು ಕಾಂಗ್ರೆಸ್ ಶಾಸಕರಿದ್ದರೂ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡಲಾಗಿದೆ. ಇನ್ನುಳಿದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಣಕ್ಕಿಳಿಯಲಿದೆ.