ಬಾಗೇಪಲ್ಲಿ, ಮಾ.13- ವಿದ್ಯುತ್ ತಂತಿ ತಗುಲಿ ವಾಟರ್ ಮ್ಯಾನ್ ಧಾರುಣವಾಗಿ ಮೃತಪಟ್ಟಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ನಲ್ಲಪ್ಪ ರೆಡ್ಡಿ ಪಲ್ಲಿ ಗ್ರಾಮದ ನಿವಾಸಿ ವೆಂಕಟರೆಡ್ಡಿ (50) ಮೃತಪಟ್ಟ ವಾಟರ್ ಮ್ಯಾನ್.
ಗ್ರಾಮಕ್ಕೆ ನೀರು ಸರಬರಾಜು ಮಾಡಲು ಹೋಗಿದ್ದ ಸಂದರ್ಭದಲ್ಲಿ ಟ್ರಾನ್ಸ್ಫಾರಂನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು , ಈ ಸಂಬಂಧ ಬೆಸ್ಕಾಂ ಇಲಾಖೆಯ ಸಿಬ್ಬಂದಿಗಳ ಗಮನಕ್ಕೆ ತಂದಿದ್ದರೂ ದುರಸ್ತಿ ಮಾಡಿರಲಿಲ್ಲ ಎನ್ನಲಾಗಿದೆ.
ಬೇಸಿಗೆಯಾದ್ದರಿಂದ ನೀರಿನ ಅಭಾವ ಹೆಚ್ಚಾಗಿದ್ದು , ಇದನ್ನು ಮನಗಂಡ ವಾಟರ್ಮ್ಯಾನ್ ತಾನೇ ಫ್ಯೂಜ್ ಹಾಕಲು ಹೋಗಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಇದೇ ಪರಿಸ್ಥಿತಿ ಇದ್ದು ವಾಟರ್ ಮ್ಯಾನ್ಗಳೇ ಫ್ಯೂಜ್ ಹಾಕಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷೆ ಕವಿತಾ ಶ್ರೀನಿವಾಸ ರೆಡ್ಡಿ, ಉಪಾಧ್ಯಕ್ಷೆ ಉಮಾದೇವಿ ನಾಗರಾಜು, ಪಿಡಿಒ ಸುವರ್ಣ ಭೇಟಿ ನೀಡಿದ್ದರು.
ಬಾಗೇಪಲ್ಲಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.