ನವದೆಹಲಿ, ಮಾ.13- ಫ್ರಾನ್ಸ್‍ನೊಂದಿಗೆ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ರಾಷ್ಟ್ರೀಯ ವಿದ್ಯಾರ್ಥಿಗಳ ಭಾರತೀಯ ಒಕ್ಕೂಟ (ಎನ್‍ಎಸ್‍ಯುಐ) ಪ್ರಧಾನಿ ಕಾರ್ಯಾಲಯದ ವಿರುದ್ಧ ದೂರು ಸಲ್ಲಿಸಿದೆ.
ದೆಹಲಿಯಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯವರೆಗೂ ಮೆರವಣಿಗೆಯಲ್ಲಿ ತೆರಳಿ ಎನ್‍ಎಸ್‍ಯುಐ ಸದಸ್ಯರು ಪೊಲೀಸರಿಗೆ ದೂರು ಸಲ್ಲಿಸಿದರು.
ರಫೇಲ್ ಯುದ್ಧ ವಿಮಾನ ಒಪ್ಪಂದವನ್ನು ಹೆಚ್‍ಎಎಲ್‍ಗೆ ನೀಡುವ ಬದಲು ರಿಲಯನ್ಸ್ ಡಿಪೆನ್ಸ್ ಕಂಪನಿಗೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪ್ರಧಾನಮಂತ್ರಿ ಕಾರ್ಯಾಲಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ಹೊರೆಯಾಗಿದೆ ಎಂದು ಎನ್‍ಎಸ್‍ಯುಐ ಆರೋಪಿಸಿದೆ.
ಮೋದಿ ಅವರ ಅಧಿಕಾರ ದುರ್ಬಳಕೆಯಿಂದ ರಿಲಯನ್ಸ್ ಡಿಫೆನ್ಸ್ ಕಂಪನಿಗೆ ಸಾವಿರಾರು ಕೋಟಿ ರೂಪಾಯಿ ಲಾಭವಾಗಿದೆ. ಆದರೆ, ಇದು ರಾಷ್ಟ್ರದ ಸುರಕ್ಷತೆ ಮತ್ತು ಭದ್ರತೆಗೆ ಗಂಭೀರವಾದ ಅಪಾಯ ತಂದೂಡ್ಡಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಎನ್‍ಎಸ್‍ಯುಐನಿಂದ ದೂರು ಸ್ವೀಕರಿಸಲಾಗಿದೆ. ಆದರೆ, ರಫೇಲ್ ಒಪ್ಪಂದದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಸರ್ಕಾರ ಹಾಗೂ ರಿಲಯನ್ಸ್ ಡಿಫೆನ್ಸ್ ಹೇಳಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.