ಬೋಯಿಂಗ್ 737 ವಿಮಾನ ದುರಂತ-ಭಾರತ ಸರ್ಕಾರದಿಂದ ಬೋಯಿಂಗ್ ವಿಮಾನಗಳ ಹಾರಾಟಕ್ಕೆ ನಿಷೇದ

ನವದೆಹಲಿ, ಮಾ.13- ಇಥಿಯೋಪಿಯಾದಲ್ಲಿ 157 ಪ್ರಯಾಣಿಕರ ಧಾರುಣ ಸಾವಿಗೆ ಕಾರಣವಾಗಿದ್ದ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಪತನ ದುರಂತದ ಬೆನ್ನಲ್ಲೇ ಭಾರತ ಸರ್ಕಾರ ಕೂಡ ಈ ಮಾದರಿಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಿದೆ.

ಆಫ್ರಿಕಾ ರಾಷ್ಟ್ರಗಳು ಮತ್ತು ಚೀನಾ ಸೇರಿದಂತೆ ವಿವಿಧ ದೇಶಗಳು ಈಗಾಗಲೇ ಬೋಯಿಂಗ್ 737 ಮ್ಯಾಕ್ಸ್ -8 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ.

ಈ ವಿಮಾನ ದುರಂತದದಲ್ಲಿ ಒಟ್ಟು 10 ಭಾರತೀಯರು ಮೃತಪಟ್ಟಿದ್ದಾರೆ. ಬೋಯಿಂಗ್ 737 ವಿಮಾನಗಳು ಪದೇ ಪದೇ ಅಪಘಾತಕ್ಕೀಡಾಗುತ್ತಿದ್ದು, ಇದೇ ಕಾರಣಕ್ಕೆ ಈ ಹಿಂದೆ ಬ್ರಿಟನ್, ಜರ್ಮನಿ, ಫ್ರಾನ್ಸ್, ಸಿಂಗಾಪುರ, ಆಸ್ಟ್ರೇಲಿಯಾ, ಮಲೇಷ್ಯಾ, ಚೀನಾ ಮತ್ತು ಒಮನ್ ರಾಷ್ಟ್ರಗಳು ಈ ಮಾದರಿಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಿವೆ. ಅಂತೆಯೇ ಇಥಿಯೋಪಿಯಾ ದುರಂತದ ಬೆನ್ನಲ್ಲೇ ಬೋಯಿಂಗ್ ಸಂಸ್ಥೆ ಈ ವಿಮಾನದ ತಾಂತ್ರಿಕ ಪರಿಶೀಲನೆ ನಡೆಸುವುದಾಗಿ ಹೇಳಿಕೆ ನೀಡಿದೆ.

ಬೋಯಿಂಗ್ ಸಂಸ್ಥೆ ಕೂಡ ಈ ವಿಮಾನ ಮಾದರಿಗೆ ತುರ್ತು ಸುಧಾರಣೆ ಮಾಡಲು ಆದೇಶ ನೀಡಿದೆ. ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇದರ ಬೆನ್ನಲ್ಲೇ ಭಾರತದ ಕೇಂದ್ರ ನಾಗರಿಕ ವಿಮಾನಯಾನ ಸಂಸ್ಥೆ ಡಿಜಿಸಿಎ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಹಾರಾಟ ನಿಷೇಧಕ್ಕೆ ನಿರ್ದೇಶನ ನೀಡಿದೆ.

ಹೀಗಾಗಿ ಭಾರತದಲ್ಲಿನ ಎಲ್ಲ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳು ಹಾರಾಟ ಸ್ಥಗಿತಗೊಳಿಸಿವೆ. ಈ ಪೈಕಿ ಸ್ಪೈಸ್ ಜೆಟ್ ಸಂಸ್ಥೆ ತನ್ನ 7 ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ಘೋಷಣೆ ಮಾಡಿದೆ.

ಅಡ್ಡಿಸ್ ಅಬಾಬಾದಿಂದ ಕೀನ್ಯಾ ರಾಜಧಾನಿ ನೈರೋಬಿಯಾಗೆ ತೆರಳುತ್ತಿದ್ದ ಇಥಿಯೋಪಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 10. ಕೆನಡಾದಲ್ಲಿನ ಭಾರತೀಯರ ಕುಟುಂಬದ ಆರು ಸದಸ್ಯರೂ ಕೂಡ ಈ ದುರ್ಘಟನೆಯಲ್ಲಿ ಸಾವಿಗೀಡಾಗಿದ್ದಾರೆ.

ಇಥಿಯೋಪಿಯಾ ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಸಾವಿಗೀಡಾಗಿದ್ದಾರೆ ಎಂಬುದು ಈ ಹಿಂದೆ ಖಚಿತಪಟ್ಟಿತು. ಆದರೆ ಕೀನ್ಯಾದ ವನ್ಯಜೀವಿ ಸಫಾರಿ ಪಾರ್ಕ್‍ಗೆ ಪ್ರವಾಸಕ್ಕಾಗಿ ತೆರಳಿಸಿದ್ದ ಕೆನಡಾದಲ್ಲಿನ ಭಾರತದ ಕುಟುಂಬದ ಆರು ಮಂದಿಯೂ ಮೃತಪಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ