ಬೆಂಗಳೂರು, ಮಾ.12- ಕುಖ್ಯಾತ ರೌಡಿ ಲಕ್ಷ್ಮಣ್ ಕೊಲೆಗೆ ಸಹಕರಿಸಿದ ಯುವತಿ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವರ್ಷಿಣಿ, ರೂಪೇಶ್, ದೇವರಾಜ್, ವರುಣ್, ಮಧು ಮತ್ತು ಅಲೋಕ್ ಬಂಧಿತ ಆರೋಪಿಗಳು ಎಂದು ಸಿಸಿಬಿಯ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ರೂಪೇಶ್ ಮತ್ತು ವರ್ಷಿಣಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, ವರ್ಷಿಣಿ ಈ ಕೊಲೆಗೆ ಪ್ರಮುಖ ಪಾತ್ರ ವಹಿಸಿದ್ದಾಳೆ. ವರ್ಷಿಣಿ ಲಂಡನ್‍ನಲ್ಲಿದ್ದುಕೊಂಡೇ ಲಕ್ಷ್ಮಣ್ ಕೊಲೆಗೆ ಸಂಚು ಮಾಡಿದ್ದಲ್ಲದೆ ಹಣಕಾಸು ನೆರವು ಸಹ ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಡಿಸಿಪಿ ಅವರು ತಿಳಿಸಿದ್ದಾರೆ.
ಈಕೆ ಲಕ್ಷ್ಮಣನ ಗೆಳತಿಯಾಗಿದ್ದು, ಆತನಿಂದ ಸಾಕಷ್ಟು ಹಣ ಪಡೆದು ಆತನ ಎದುರಾಳಿ ರೌಡಿಗೆ ಹಣಕಾಸು ನೆರವು ನೀಡಿರುವುದು ಸಹ ತನಿಖೆಯಿಂದ ತಿಳಿದುಬಂದಿದೆ.
ಲಕ್ಷ್ಮಣ್‍ನನ್ನು ಮಾ.7ರಂದು ಹೊಟೇಲ್‍ಗೆ ಕರೆಸಿದ್ದಲ್ಲದೆ ಅತ್ತ ಹಂತಕರಿಗೂ ಸಹ ಈತ ಬಂದಿರುವ ವಿಷಯ ತಿಳಿಸಿ ಕೊಲೆಗೆ ಸಹಕರಿಸಿದ್ದಳೆಂದು ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರಾಗಿರುವ ಉಳಿದ ಆರೋಪಿಗಳನ್ನು ಸಹ ತೀವ್ರ ವಿಚಾರಣೆ ಗೊಳಪಡಿಸಲಾಗಿದೆ. ಆರೋಪಿ ರೂಪೇಶ್ ಮತ್ತು ಲಕ್ಷ್ಮಣ್‍ಗೆ ಹಳೆಯ ವೈಷಮ್ಯವಿತ್ತು ಎಂಬುದು ಕಂಡುಬಂದಿದ್ದು, ಈ ಬಗ್ಗೆಯೂ ಸಹ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.