ಬೆಂಗಳೂರು, ಮಾ.12- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡದಿದ್ದರೆ ಸ್ಪರ್ಧಾ ಕಣದಿಂದಲೇ ಹಿಂದೆ ಸರಿಯಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಿರ್ಧರಿಸಿದ್ದಾರೆ.
ಮೈಸೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡಿ. ನಾನು ಅಲ್ಲಿಂದಲೇ ಮೈತ್ರಿಕೂಟದ ಕ್ಯಾಂಡಿಡೇಟ್ ಆಗಿ ಕಣಕ್ಕಿಳಿಯುತ್ತೇನೆ. ಒಂದು ವೇಳೆ ಮೈಸೂರು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡದಿದ್ದರೆ ಚುನಾವಣಾ ಕಣಕ್ಕೇ ಇಳಿಯುವುದಿಲ್ಲ ಎಂದು ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ಗೆ ಸಂದೇಶ ರವಾನಿಸಿದ್ದಾರೆ.
ದೇವೇಗೌಡರು ಮೈಸೂರು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್ ಪಕ್ಷದ ಮೇಲೆ ಈ ಮಟ್ಟದ ಒತ್ತಡ ಹೇರುತ್ತಿರುವುದರ ಹಿಂದೆ ಹಲವು ಮಹತ್ವದ ಕಾರಣಗಳಿವೆ.
ಮೊದಲನೆಯದಾಗಿ,ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಯಾವ ಕಾರಣಕ್ಕೂ ಜೆಡಿಎಸ್ ಅನ್ನು ಸೋಲಿಸಲು ಮುಂದಾಗುವುದಿಲ್ಲ ಎಂಬುದು ದೇವೇಗೌಡರ ಲೆಕ್ಕಾಚಾರ.
ಒಂದು ವೇಳೆ ಸಿದ್ಧರಾಮಯ್ಯ ಅವರ ಜಿಲ್ಲೆಯಲ್ಲೇ ಜೆಡಿಎಸ್ ಸೋಲು ಕಂಡರೆ ಅದರ ಹೊಣೆಯನ್ನು ಸಿದ್ಧರಾಮಯ್ಯ ಅವರ ವಿರುದ್ಧ ಹೊರಿಸುವುದು ಸುಲಭ. ಸಿದ್ಧರಾಮಯ್ಯ ಅವರಿದ್ದೂ ಮೈತ್ರಿ ಕ್ಯಾಂಡಿಡೇಟ್ ಸೋತರೆ ಅದರ ನೈತಿಕ ಹೊಣೆಯನ್ನು ಅವರು ಹೊರಬೇಕಾಗುತ್ತದೆ.
ಹಾಗೇನಾದರೂ ಆದರೆ ಲೋಕಸಭಾ ಚುನಾವಣೆಯ ನಂತರ ನಮ್ಮ ದಾರಿ ನಮಗೆ ಎಂದು ಕಾಂಗ್ರೆಸ್ ವರಿಷ್ಟರಿಗೆ ಹೇಳುವುದು ಮಾತ್ರವಲ್ಲ, ಕರ್ನಾಟಕದ ರಾಜಕೀಯ ಚಿತ್ರಣವನ್ನು ಬದಲು ಮಾಡಲು ದೇವೇಗೌಡರು ಮುಂದಾಗುವುದೂ ಅಸಹಜವಲ್ಲ.
ಒಂದು ವೇಳೆ ತಾವು ಕಣಕ್ಕಿಳಿಯದೆ ಹೋದರೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕ್ಯಾಂಡಿಡೇಟ್ ಅನ್ನು ಸೋಲಿಸಲು ಬೇರೆ ಮಾರ್ಗಗಳಿಲ್ಲ. ಕಾಂಗ್ರೆಸ್ನಿಂದ ವಿಜಯಶಂಕರ್ ಸ್ಪರ್ಧಿಸಿದರೂ ಜೆಡಿಎಸ್ ಮತಗಳು ಕಳೆದ ಬಾರಿಯಂತೆಯೇ ಬಿಜೆಪಿ ಕಡೆ ವಾಲಬಹುದು.
ಹಾಗೇನಾದರೂ ಆದರೆ ಅದು ತಮ್ಮ ವರ್ಚಸ್ಸಿಗೆ ಧಕ್ಕೆ. ಹೀಗಾಗಿ ಯಾವ ಕಾರಣಕ್ಕೂ ಈ ಬೆಳವಣಿಗೆ ನಡೆಯಲು ಅವಕಾಶ ನೀಡಬಾರದು ಎಂಬುದು ದೇವೇಗೌಡರ ಲೆಕ್ಕಾಚಾರ. ಒಂದು ವೇಳೆ ತಮ್ಮ ಲೆಕ್ಕಾಚಾರಕ್ಕೆ ವಿರುದ್ಧವಾಗಿ ಕಾಂಗ್ರೆಸ್ ನಡೆದುಕೊಂಡರೆ ಲೋಕಸಭಾ ಚುನಾವಣೆಯ ನಂತರದ ಬೆಳವಣಿಗೆಗಳು ಏನೂ ಆಗಬಹುದು ಎಂದವರು ಕಾಂಗ್ರೆಸ್ ಹೈಕಮಾಂಡ್ ವರಿಷ್ಟರಿಗೆ ಹೇಳಿದ್ದಾರೆ.
ಈ ಮಧ್ಯೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ದೇವೇಗೌಡರ ಮೇಲೆ ಒತ್ತಡವಿದೆಯಾದರೂ ಅಲ್ಲಿ ಬಿಜೆಪಿ ಕ್ಯಾಂಡಿಡೇಟ್ ಆಗಿ ಸ್ಪರ್ಧಿಸಿರುವ ಡಿ.ವಿ.ಸದಾನಂದಗೌಡರ ವಿರುದ್ಧ ಕಣಕ್ಕಿಳಿಯುವುದು ಸ್ವತ: ದೇವೇಗೌಡರಿಗೇ ಇಷ್ಟವಿಲ್ಲ.
ಯಾಕೆಂದರೆ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಿಜೆಪಿಯಲ್ಲಿ ಅವರ ವಿರುದ್ಧ ನಡೆಯುತ್ತಿದ್ದ ಆಟಗಳಿಗೆ ದೇವೇಗೌಡರೇ ಬ್ರೇಕ್ ಹಾಕುತ್ತಿದ್ದರು. ಸದಾನಂದಗೌಡರಿಗೆ ಮುಖಭಂಗ ಮಾಡಲು ಅವತ್ತು ಯಡಿಯೂರಪ್ಪ ಗ್ಯಾಂಗ್ ಹವಣಿಸುತ್ತಿದ್ದರೂ ಅದನ್ನು ಹಲವು ಬಾರಿ ವಿಫಲಗೊಳಿಸಿದ್ದರು.
ಅಂದಿನಿಂದ ಇಂದಿನವರೆಗೂ ತಮಗೆ ಆಪ್ತರಾಗಿರುವ ಡಿ.ವಿ.ಸದಾನಂದಗೌಡರ ವಿರುದ್ಧ ಸ್ಪರ್ಧಿಸುವುದು ದೇವೇಗೌಡರಿಗೆ ಇಷ್ಟವಿಲ್ಲ. ಒಂದು ವೇಳೆ ಆ ಕ್ಷೇತ್ರದಿಂದ ಜೆಡಿಎಸ್ ಸ್ಪರ್ಧಿಸುವ ಸ್ಥಿತಿ ಬಂದರೂ ಅದಕ್ಕಾಗಿ ಬೇರೊಬ್ಬ ಕ್ಯಾಂಡಿಡೇಟ್ ಅನ್ನು ದೇವೇಗೌಡರು ಹುಡುಕಿಟ್ಟಿದ್ದಾರೆ.
ಈ ಮಧ್ಯೆ ಮೈಸೂರು ಲೋಕಸಭಾ ಕ್ಷೇತ್ರದಿಂದ ತಾವು ಸ್ಪರ್ಧಿಸಿದರೆ ತಮ್ಮ ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವ ಹಾಸನ ಹಾಗೂ ಮಂಡ್ಯದಲ್ಲಿ ಸ್ಪರ್ಧಿಸಲಿರುವ ನಿಖಿಲ್ ಕುಮಾರಸ್ವಾಮಿ ಅವರಿಗೂ ಅನುಕೂಲವಾಗಲಿದೆ ಎಂಬುದು ದೇವೇಗೌಡರ ಲೆಕ್ಕಾಚಾರ.
ಅಕ್ಕ-ಪಕ್ಕದಲ್ಲೇ ಇರುವ ಕ್ಷೇತ್ರಗಳಾಗಿರುವುದರಿಂದ ಎಲ್ಲ ಕ್ಷೇತ್ರಗಳ ಮೇಲೆ ನಿಗಾ ಇಡಬಹುದು.ಮತ್ತು ಕಾಂಗ್ರೆಸ್ ನಾಯಕರ ಪೈಕಿ ಯಾರಾದರೂ ಜೆಡಿಎಸ್ ಕ್ಯಾಂಡಿಡೇಟುಗಳನ್ನು ಸೋಲಿಸಲು ಹುನ್ನಾರ ಮಾಡಿದರೆ ಆ ಕುರಿತು ತಕ್ಷಣವೇ ಕೈ ಪಾಳೆಯಕ್ಕೆ ವರದಿ ನೀಡಬಹುದು.
ಹೀಗೆ ಹಲವು ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ ಒತ್ತಡ ಹೇರಿರುವ ದೇವೇಗೌಡ,ಒಂದು ವೇಳೆ ತಮ್ಮ ಪಕ್ಷಕ್ಕೆ ಮೈಸೂರು ಕ್ಷೇತ್ರವನ್ನು ಬಿಟ್ಟು ಕೊಡದೆ ಹೋದರೆ ಸ್ಪರ್ಧೆಯ ಕಣಕ್ಕೆ ಇಳಿಯುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮೆಸೇಜು ಮುಟ್ಟಿಸಿದ್ದಾರೆ.
ಹೀಗಾಗಿ ಈ ತಿಂಗಳ ಹದಿನೈದು ಅಥವಾ ಹದಿನಾರರಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ.