ಸಂಸದ ಡಿ.ಕೆ.ಸುರೇಶ್‍ವರನ್ನು ಸೋಲಿಸಲು ಬಿಜೆಪಿಯಿಂದ ರಾಜಕೀಯ ಚಾಣಾಕ್ಷ ನಡೆ

ಬೆಂಗಳೂರು, ಮಾ.12-ಬಿಜೆಪಿಯ ರಾಜಕೀಯ ತಂತ್ರಗಾರಿಕೆಗಳನ್ನು ಹಾಗೂ ಸರಕಾರ ರಚನೆ ಪ್ರಯತ್ನಗಳನ್ನು ವಿಫಲಗೊಳಿಸುತ್ತ ಬಂದಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್‍ಗೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಅವರ ಸಹೋದರ ಡಿ.ಕೆ ಸುರೇಶ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಣಿಸಲು ತನ್ನೆಲ್ಲಾ ರಾಜಕೀಯ ಚಾಣಾಕ್ಷ ನಡೆಗಳನ್ನು ಅನುಸರಿಸುತ್ತಿದ್ದಾರೆ.

ಗುಜರಾತ್‍ನ ರಾಜ್ಯಸಭೆ ಚುನಾವಣೆಯಿಂದ ಹಿಡಿದು ಇತ್ತೀಚೆಗೆ ನಡೆದ ರಾಮನಗರ ವಿಧಾನಸಭೆ ಉಪಚುನಾವಣೆ ತನಕ ಬಿಜೆಪಿಯನ್ನ ಇನ್ನಿಲ್ಲದಂತೆ ಕಾಡಿದ ಡಿಕೆ ಬ್ರದರ್ಸ್‍ಗೆ ಈ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಭಾರತೀಯ ಜನತಾ ಪಕ್ಷ ರಾಜಕೀಯ ತಂತ್ರಗಾರಿಕೆಯನ್ನ ಹೆಣೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಡಿಕೆಶಿ ಸಹೋದರನಾದ ಸಂಸದ ಡಿ.ಕೆ ಸುರೇಶ್ ಅವರನ್ನ ಸೋಲಿಸಲು ಸ್ಕೇಚ್?? ಹಾಕತೊಡಗಿದೆ.

ಬೆಂಗಳೂರು ಗ್ರಾಮಾಂತರದಲ್ಲಿ ಪ್ರಬಲವಾಗಿ ಬೆಳೆದಿರುವ ಸಂಸದ ಡಿ.ಕೆ ಸುರೇಶ್ ಗೆ ಬಲವಾದ ಸ್ಪರ್ಧೆ ಒಡ್ಡಲು ಸ್ಥಳೀಯರಾದ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ರುದ್ರೇಶ್? ಅವರನ್ನ ಕಣಕ್ಕಿಳಿಸಿ ಪೈಪೋಟಿ ನೀಡಲು ರಾಜ್ಯ ಬಿಜೆಪಿ ಅದ್ಯಕ್ಷ ಯಡಿಯೂರಪ್ಪ ರಾಜಕೀಯ ಲೆಕ್ಕಾಚಾರ ಹಾಕಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಜೆಡಿಎಸ್- ಕಾಂಗ್ರೆಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಡಿ.ಕೆ ಸುರೇಶ್ ಸೋಲಿಸಲು ಲಿಂಗಾಯತ ಸಮುದಾಯಕ್ಕೆ ಸೇರಿದ ಎಂ.ರುದ್ರೇಶ್? ಅವರನ್ನು ಕಣಕ್ಕಿಳಿಸುವುದು ಉತ್ತಮ ಎನ್ನುವ ಅಭಿಪ್ರಾಯವನ್ನ ರಾಮನಗರದ ಹಲವು ಬಿಜೆಪಿ ಮುಖಂಡರು ವ್ಯಕ್ತಪಡಿಸಿದ್ದಾರೆ.

ಇನ್ನು ರುದ್ರೇಶ್ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವುದರಿಂದ ಬಿಜೆಪಿಯ ಸಾಂಪ್ರದಾಯಿಕ ಮತಗಳ ಜತೆಗೆ ಮಾಗಡಿ, ರಾಮನಗರ, ಕನಕಪುರ, ಆನೇಕಲ್ , ಕುಣಿಗಲ್ ಭಾಗಗಳಲ್ಲಿನ ಸುಮಾರು 2 ಲಕ್ಷ ಲಿಂಗಾಯತ ಸಮುದಾಯದ ಮತಗಳನ್ನು ಹೆಚ್ಚಾಗಿ ಪಡೆದು ಗೆಲ್ಲುವ ಸಾಧ್ಯತೆಗಳ ಬಗ್ಗೆ ಪ್ಲಾನ್ ರೂಪಿಸಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಎಂ. ರುದ್ರೇಶ್ ಆಸಕ್ತಿ ತೋರಿಸಿದ್ದು, ಅದಕ್ಕೆ ಪೂರಕವಾಗಿ ಈಗಾಗಲೇ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿಯ ಪ್ರಭಾವ, ಹಿಂದುಳಿದ ವರ್ಗಗಳು ಮತ್ತು ಲಿಂಗಾಯತರ ಬೆಂಬಲದಿಂದ ರುದ್ರೇಶರನ್ನು ಡಿ.ಕೆ ಸುರೇಶ್ ವಿರುದ್ಧ ಕಣಕ್ಕಿಳಿಸಿ ಗೆಲ್ಲುವ ಸಾಧ್ಯತೆಗಳ ಬಗ್ಗೆ ಸಮಾಲೋಚನೆ ಪಕ್ಷದ ವಲಯದಲ್ಲಿ ನಡೆಯುತ್ತಿದೆ.

ಸಿ.ಪಿ ಯೋಗಿಶ್ವರ್‍ರನ್ನ ಕಣಕ್ಕಿಳಿಸಲೂ ಚಿಂತನೆ:
ರುದ್ರೇಶ ಜತೆಗೆ ಚನ್ನಪಟ್ಟಣದವರಾದ ಮಾಜಿ ಸಚಿವ ಸಿ.ಪಿ ಯೋಗೀಶ್ವರ್?ರನ್ನು ಡಿ.ಕೆ ಸುರೇಶ್ ವಿರುದ್ಧ ಕಣಕ್ಕಿಳಿಸಿ ಪ್ರಬಲ ಪೈಪೋಟಿ ನೀಡಲು ಸಾಧ್ಯವೇ …? ಎನ್ನುವ ಬಗ್ಗೆಯೂ ಬಿಜೆಪಿ ಸಮಾಲೋಚನೆ ನಡೆಸುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಹಾಗು ಚನ್ನಪಟ್ಟಣ ಭಾಗದಲ್ಲಿ ತಮ್ಮದೇ ಆದ ಮತ ಬ್ಯಾಂಕ್ ಹೊಂದಿದ ಯೋಗಿಶ್ವರ್‍ರನ್ನು ನಿಲ್ಲಿಸಿದರೆ ಡಿ.ಕೆ ಬ್ರದರ್ಸ್?ಗೆ ಸವಾಲೊಡ್ಡಬಹುದು ಎನ್ನುವ ಚರ್ಚೆಯೂ ನಡೆದಿದೆ.

ಈ ನಡುವೆ ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವತ್ಥ್? ನಾರಾಯಣ, ಮಾಜಿ ಸಂಸದೆ ತೇಜಸ್ವಿನಿ ಸಹ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಯಾರನ್ನು ನಿಲ್ಲಿಸಿದರೆ ಡಿ.ಕೆ ಸಹೋದರರಿಗೆ ತೀವ್ರ ಸ್ಪರ್ಧೆ ಒಡ್ಡಬಹುದು ಎನ್ನುವ ಬಗ್ಗೆ ಬಿಜೆಪಿ ಚರ್ಚೆ ನಡೆಸುತ್ತಿದ್ದು, ಅಭ್ಯರ್ಥಿ ಯಾರಾಗಬೇಕು ಎನ್ನುವುದಕ್ಕೆ ಅಭಿಪ್ರಾಯ ಪಡೆಯುತ್ತಿದೆ. ಜೊತೆಗೆ ಸಮೀಕ್ಷೆಯನ್ನೂ ನಡೆಸುತ್ತಿದೆ.

ಮೊದಲು ಬಿಜೆಪಿಯಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕ ಕಾಂಗ್ರೆಸ್ ಪಕ್ಷದ ಮುಖಂಡ ಮಾಗಡಿ ಬಾಲಕೃಷ್ಣ ಅವರು ಬಿಜೆಪಿ ಸೇರಲು ಆಸಕ್ತಿ ವ್ಯಕ್ತಪಡಿಸಿದರೆ, ಅವರನ್ನೂ ಚುನಾವಣೆಗೆ ನಿಲ್ಲಿಸಿದರೆ ಹೇಗೆ ಎನ್ನುವ ಬಗ್ಗೆಯೂ ಬಿಜೆಪಿ ಆಂತರಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಒಲವು ತೋರಿದ್ದ ಗುಜರಾತ್‍ನ ಕಾಂಗ್ರೆಸ್ ಶಾಸಕರನ್ನು ಬಿಡದಿ ಬಳಿ ರೆಸಾರ್ಟ್‍ನಲ್ಲಿ ಹಿಡಿದಿಟ್ಟುಕೊಂಡು ಅಮಿತ್ ಶಾಗೆ ಮುಜುಗರ ಮಾಡಿದ, ರಾಜ್ಯದಲ್ಲಿ ಆಪರೇಶನ್ ಕಮಲಕ್ಕೆ ತಡೆಗೋಡೆಯಾಗಿ ನಿಂತು ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರ ರಕ್ಷಿಸುತ್ತಿರುವ, ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಹೈಜಾಕ್ ಮಾಡಿ ಪಕ್ಷಕ್ಕೆ ಅವಮಾನ ಮಾಡಿದ, ಬಳ್ಳಾರಿಯ ಲೋಕಸಭೆ ಉಪ ಚುನಾವಣೆಯಲ್ಲಿ ಉಸ್ತುವಾರಿ ವಹಿಸಿಕೊಂಡು ಶ್ರೀರಾಮುಲು ಸಹೋದರಿ ಶಾಂತಾ ಅವರಿಗೆ ಹೀನಾಯ ಸೋಲಿನ ರುಚಿ ತೋರಿಸಿದ ಡಿ.ಕೆ ಬ್ರದರ್ಸ್ ಗೆ ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಪಾಠ ಕಲಿಸಲು ಬಿಜೆಪಿ ಹವಣಿಸುತ್ತಿದೆ.

ಇನ್ನೂ ಚುನಾವಣೆಯಲ್ಲಿ ಸೋಲಿಸಲಾಗದಿದ್ದರೂ ಕಡೇ ಪಕ್ಷ ಪ್ರಬಲ ಅಭ್ಯರ್ಥಿ ನಿಲ್ಲಿಸಿ ತೀವ್ರ ಪೈಪೋಟಿಯನ್ನಾದರೂ ನೀಡಿ ಸೋಲಿನ ಭಯದಿಂದಾಗಿ ಡಿ.ಕೆ ಸಹೋದರರು ತಮ್ಮ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿ ರಾಜ್ಯದ ಉಳಿದ ಕ್ಷೇತ್ರಗಳಲ್ಲಿ ಅಬ್ಬರದ ಚುನಾವಣೆ ಪ್ರಚಾರ ನಡೆಸದಂತೆ ತಡೆಯುವ ಕುರಿತು ಭಾರತೀಯ ಜನತಾ ಪಕ್ಷದ ನಾಯಕರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ