ಬೆಂಗಳೂರು, ಮಾ.12- ಮೋದಿ ಕನ್ನಡ ಮಾತನಾಡಿದ್ರೆ ಕೇಳೋಕೆ ಚೆಂದ ಎಂದು ಟ್ವೀಟ್ ಮಾಡಿದ್ದ ಕನ್ನಡತಿಗೆ ಮೋದಿ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ಒಂದು ಸುಂದರ ಭಾಷೆ ಎಂದು ಪ್ರಧಾನಿ ಮೋದಿಯವರು ಟ್ವೀಟ್ ಮಾಡಿದ್ದಾರೆ.
ಕನ್ನಡಿಗರೊಬ್ಬರು ಮಾಡಿದ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ಭಾಷೆ ಅತ್ಯಂತ ಸುಂದರವಾದ ಭಾಷೆ ಎಂದು ಬಣ್ಣಿಸಿದ್ದಾರೆ. ಟ್ವಿಟರ್ನಲ್ಲಿ ಕರ್ನಾಟಕದ ಸಹನಾ ಹೊಳೀಮಠ ಎಂಬುವರ ಟ್ವೀಟ್ಗೆ ಮೋದಿ ಪ್ರತಿಕ್ರಿಯಿಸಿದ್ದಾರೆ.
ಕಲಬುರಗಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಮೋದಿ ಅವರು ಪ್ರಾರಂಭದಲ್ಲಿ ಕನ್ನಡದಲ್ಲಿ ಮಾತನಾಡಿದ್ದರು. ಇದನ್ನು ಉಲ್ಲೇಖಿಸಿ ಸಹನಾ ಅವರು ಮೋದಿಜೀ ಕನ್ನಡದಲ್ಲಿ ಮಾತನಾಡಿದಾಗ ಖುಷಿ ಆಗುತ್ತದೆ ಅಲ್ವ ಎಂದಿದ್ದರು. ಅಲ್ಲದೆ, ಅವರು ಕನ್ನಡದಲ್ಲಿ ಮಾತನಾಡುವುದೇ ಒಂದು ಸುಂದರ ಕ್ಷಣ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಕನ್ನಡ ಒಂದು ಸುಂದರ ಭಾಷೆ ಎಂದು ಟ್ವೀಟ್ ಮಾಡುವ ಮೂಲಕ ಅಸಂಖ್ಯಾತ ಕನ್ನಡಿಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ.
ಪ್ರಧಾನಿ ಪ್ರತಿಕ್ರಿಯೆ ನೋಡಿ ಅದನ್ನು ಮೆಚ್ಚಿಕೊಂಡಿರುವ ಕನ್ನಡಿಗರು ಪ್ರಧಾನಿ ಟ್ವೀಟ್ಗೆ ಬಹಳ ವಿಶೇಷವಾಗಿ ಮರು ಉತ್ತರಿಸಿದ್ದಾರೆ. ತುಂಬಾ ಚೆನ್ನಾಗಿ ಹೇಳಿದಿರಿ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿಯನ್ನು ಕೊಂಡಾಡಿದ ಕನ್ನಡಿಗರು
ಪ್ರಧಾನಿ ಪ್ರತಿಕ್ರಿಯೆ ನೋಡಿ ಅದನ್ನು ಮೆಚ್ಚಿಕೊಂಡಿರುವ ಕನ್ನಡಿಗರು ಪ್ರಧಾನಿ ಟ್ವೀಟ್ಗೆ ಬಹಳ ವಿಶೇಷವಾಗಿ ಮರು ಉತ್ತರಿಸಿದ್ದಾರೆ. ತುಂಬಾ ಚೆನ್ನಾಗಿ ಹೇಳಿದಿರಿ.
ನಿಮ್ಮ ಬಾಯಿಗೆ ಸಕ್ಕರೆ ಹಾಕಬೇಕೆಂದು ಒಬ್ಬರು ಟ್ವೀಟ್ ಮಾಡಿರುವುದು ವಿಶೇಷವಾಗಿದೆ. ಅಲ್ಲದೆ, ನಿಮ್ಮ ಕನ್ನಡದ ಮೇಲಿನ ಪ್ರೀತಿಗೆ ಧನ್ಯವಾದಗಳು ಎಂದು ಸಾಕಷ್ಟು ಟ್ವೀಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಕಲ್ಬುರ್ಗಿಯಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಕನ್ನಡದಲ್ಲಿ ಮಾತನಾಡಿದ್ದ ಮೋದಿ, ಕಲ್ಬುರ್ಗಿಯ ಎಲ್ಲ ಬಂಧು-ಭಗಿನಿಯರಿಗೆ ನಮಸ್ಕಾರ. ಕಲ್ಬುರ್ಗಿ ಜಿಲ್ಲೆ ತ್ಯಾಗ, ಸೇವಾ ಮನೋಭಾವಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಬಂದು ಮಾತನಾಡುತ್ತಿರುವುದು ನನಗೆ ಅತ್ಯಂತ ಸಂತೋಷ ತಂದಿದೆ ಎಂದು ಕನ್ನಡದಲ್ಲೇ ಹೇಳಿದ್ದರು. ಆ ವಿಡಿಯೋ ಈಗ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದೆ.