ಹಾಸನ, ಮಾ.12- ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಜೆಡಿಎಸ್ ರಾಜಕಾರಣದ ಶಕ್ತಿ ಕೇಂದ್ರವೆಂದೇ ಬಿಂಬಿತವಾಗಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ.
ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಅಂತಿಮಗೊಂಡಿದ್ದು ಸಮ್ಮಿಶ್ರ ಸರ್ಕಾರದ ಒಪ್ಪಂದದಂತೆ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದು ಬಹುತೇಕ ಖಚಿತವಾಗಿದೆ. ಆದರೆ ಬಿಜೆಪಿ ಪಕ್ಷದಿಂದ ಚುನಾವಣಾ ಕಣಕ್ಕಿಳಿಯುವ ಅಭ್ಯರ್ಥಿ ಯಾರು ಎಂದು ಇನ್ನೂ ಅಂತಿಮಗೊಂಡಿಲ್ಲ. ಆದರೂ ಪ್ರಬಲ ಹುರಿಯಾಳನ್ನು ಅಖಾಡಕ್ಕಿಳಿಸಲು ತಯಾರಿ ನಡೆದಿದೆ.
ಮಾಜಿ ಸಚಿವ ಎ.ಮಂಜು ಕಮಲ ತೆಕ್ಕೆಗೆ ಮರಳುವ ಸಾಧ್ಯತೆ ಇದೆ ಎಂಬ ಸಾಧ್ಯತೆಗಳು ಕೇಳಿ ಬರುತ್ತಿದ್ದು , ಅವರು ಸ್ಪರ್ಧೆಗಿಳಿದರೆ ಬದಲಾಗುವ ಚಿತ್ರಣ ಕುತೂಹಲ ಕೆರಳಿಸಿದೆ.
ಜೆಡಿಎಸ್ ಪಕ್ಷದ ಭದ್ರಕೋಟೆ ಎಂದೆ ಬಿಂಬಿತವಾಗಿರುವ ಹಾಸನದಲ್ಲಿ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರು ಹಲವು ದಶಕದಿಂದ ಹಾಸನ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲೆಯ ಒಟ್ಟು 8 ವಿಧಾನಸಭಾ ಕ್ಷೇತ್ರದಲ್ಲಿ 6 ಜೆಡಿಎಸ್ ಶಾಸಕರಿದ್ದು , ಇಬ್ಬರು ಬಿಜೆಪಿ ಶಾಸಕರಿದ್ದಾರೆ. ಜೆಡಿಎಸ್ ಬಲಿಷ್ಠವಾಗಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ತನ್ನದೇ ಆದ ವೋಟ್ ಬ್ಯಾಂಕ್ ಹೊಂದಿದೆ. ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ಕಣಕ್ಕಿಳಿದರೆ ಪ್ರತಿ ಸ್ಪರ್ಧಿಯಾಗಿ ಬಿಜೆಪಿಯ ಹುರಿಯಾಳು ಯಾವ ರೀತಿ ಪೈಪೋಟಿ ನೀಡುತ್ತಾರೆ ಎಂಬುದು ಈಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರು ಒಂದೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದ್ದರು. ಪ್ರತಿ ಬಾರಿಯ ಚುನಾವಣೆಯಲ್ಲಿ ಜಾತಿವಾರು ಲೆಕ್ಕಾಚಾರವೇ ಪ್ರಮುಖ ಪಾತ್ರ ವಹಿಸುತ್ತಿದ್ದು ಒಕ್ಕಲಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈ ಬಾರಿಯೂ ಇದೇ ಸಮುದಾಯದ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎನ್ನಲಾಗುತ್ತಿದೆ.
ಜೆಡಿಎಸ್ ವರಿಷ್ಠ ಮಾಜಿ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು , ಮಾ.13 ರಂದು ಅಧಿಕೃತ ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ. ಇದು ಅವರ ಮೊದಲ ಚುನಾವಣಾ ಅಗ್ನಿಪರೀಕ್ಷೆಯಾಗಿದ್ದರೂ ರಾಜಕೀಯ ಅವರಿಗೇನು ಹೊಸತಲ್ಲ . ಕಳೆದ ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಲವಾರು ಕಾರ್ಯಕ್ರಮ ಹಾಗೂ ಪ್ರಚಾರಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.
ಜೆಡಿಎಸ್ ರಾಜ್ಯ ಯುವ ಘಟಕದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಜ್ವಲ್ ಉತ್ತಮ ಸಂಘಟನಕಾರ ಎಂಬ ಛಾಪು ಮೂಡಿಸಿದ್ದಾರೆ.
ಬಿಜೆಪಿಯಲ್ಲಿ ಗೊಂದಲ: ರಾಜ್ಯ ಬಿಜೆಪಿ ನಾಯಕರು ಎ.ಮಂಜು ಅವರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು , ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. ಆದರೆ ಇದರ ಬಗ್ಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್ ಹಾಗೂ ಅವರ ಬೆಂಬಲಿಗರು ಎ.ಮಂಜು ಸೇರ್ಪಡೆ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಸ್ಥಳೀಯರ ಮುಖಂಡರ ವಿಶ್ವಾಸ ಪಡೆದು ಮುಂದಿನ ಹೆಜ್ಜೆ ಇಡುವಂತೆ ವರಿಷ್ಠರನ್ನು ಒತ್ತಾಯಿಸಿದ್ದಾರೆ. ಆದರೂ ಅವರ ಮಾತಿಗೆ ಎಷ್ಟು ಬೆಲೆ ಸಿಗುತ್ತದೆ ಎಂಬುದು ಇನ್ನು ತಿಳಿಯುತ್ತಿಲ್ಲ. ಮಂಜು ಅವರು ಬಿಜೆಪಿಗೆ ಆಹ್ವಾನಿಸಲು ಒಂದು ಪಡೆ ಈಗಾಗಲೇ ಸಿದ್ಧತೆ ನಡೆಸಿದ್ದು ಇದು ಚುನಾವಣೆಯ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದು ಕಾದು ನೋಡಬೇಕಿದೆ.
ಹಾಸನ ಲೋಕಸಭಾ ಕ್ಷೇತ್ರವು 8 ವಿಧಾನಸಭಾ ಕ್ಷೇತ್ರಗಳು ಒಳಗೊಂಡಿದ್ದು ಕ್ಷಣಗಳು ಒಟ್ಟು 16,29, 587 ಮತದಾರನನ್ನು ಹೊಂದಿದ್ದು ಅತಿ ಹೆಚ್ಚು ಮತದಾರರನ್ನು ಅರಕಲಗೋಡು ಕ್ಷೇತ್ರ ಒಟ್ಟು 2,16,223 ಮತದಾರರನ್ನು ಹೊಂದಿದೆ ಬೇಲೂರು ವಿಧಾನಸಭಾ ಕ್ಷೇತ್ರ. ಅತೀ ಕಡಿಮೆ 1,90,383 ಮತದಾರರನ್ನು ಹೊಂದಿದೆ. ಶ್ರವಣಬೆಳಗೊಳ ಕ್ಷೇತ್ರದ ಲ್ಲಿ 1,99,235 ಮತದಾರರಿದ್ದು ಅರಸೀಕೆರೆ 2,07,621 ಹಾಸನ 2,11,905 ಹೊಳೆನರಸೀಪುರ 2,08,824 ಸಕಲೇಶಪುರ 1,95,574 ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರ ಸುಮಾರು 1,99,822 ಮತದಾರರನ್ನು ಒಳಗೊಂಡಿದೆ. ಒಟ್ಟಾರೆ ಹಾಸನ ಲೋಕಸಭಾ ಕ್ಷೇತ್ರ ಒಟ್ಟು 2235 ಮತಗಟ್ಟೆಗಳು ಹಾಗೂ 13 ಅತಿಸೂಕ್ಷ್ಮ ಮತಗಟ್ಟೆಗಳನ್ನು ಹೊಂದಿದೆ .
ಒಟ್ಟಾರೆ ಹಾಸನ ಲೋಕಸಭಾ ಕ್ಷೇತ್ರ ಹಲವು ಕುತೂಹಲ, ಸನ್ನಿವೇಶನಗಳನ್ನು ಕಾಣುತ್ತಿದೆ.