ಅಳಿಸಲಾಗದ ಶಾಯಿ ಪೂರೈಕೆ-ಚುನಾವಣಾ ಆಯೋಗದಿಂದ ಮೈಸೂರಿನ ಕಾರ್ಖಾನೆಗೆ ಬೇಡಿಕೆ ಸಲ್ಲಿಕೆ

ಮೈಸೂರು, ಮಾ.12- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗ ಅಳಿಸಲಾಗದ ಶಾಯಿ ಪೂರೈಕೆ ಮಾಡುವಂತೆ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಗೆ ಬೇಡಿಕೆ ಸಲ್ಲಿಸಿದೆ.

10ಎಂಎಲ್‍ನ 26ಲಕ್ಷ ಇಂಕ್ ಬಾಟಲ್‍ಗಳಿಗಾಗಿ ಕೇಂದ್ರ ಚುನಾವಣಾ ಆಯೋಗ ಮನವಿ ಸಲ್ಲಿಸಿದೆ. ಇದರಿಂದ 33ಕೋಟಿ ರೂ. ಆದಾಯ ಮೈ ಲ್ಯಾಕ್‍ಗೆ ಸೇರಲಿದೆ.

ಮೈ ಲ್ಯಾಕ್ ಈಗಾಗಲೇ ಕೇಂದ್ರ ಚುನಾವಣಾ ಆಯೋಗಕ್ಕೆ 20ಲಕ್ಷ ಇಂಕ್ ಬಾಟಲ್‍ಗಳನ್ನು ಪೂರೈಕೆ ಮಾಡಿದ್ದು ಇನ್ನುಳಿದ 6 ಲಕ್ಷ ಇಂಕ್ ಬಾಟಲ್‍ಗಳನ್ನು ಒಂದು ವಾರದೊಳಗೆ ಪೂರೈಕೆ ಮಾಡಲಿದೆ.

ಲೋಕಸಭಾ ಚುನಾವಣೆಗಾಗಿ ಡಿಸೆಂಬರ್ ತಿಂಗಳಲ್ಲಿನಲ್ಲಿಯೇ ಚುನಾವಣಾ ಆಯೋಗ ಅಳಿಸಲಾಗದ ಇಂಕ್‍ಗಾಗಿ ಮನವಿ ಮಾಡಿತ್ತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1937ರಲ್ಲಿ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯನ್ನು ಸ್ಥಾಪಿಸಿದರು.

1962ರಲ್ಲಿ ಅಳಿಸಲಾಗದ ಶಾಯಿ ತಯಾರಿಸಲು ಈ ಕಾರ್ಖಾನೆ ಆರಂಭಿಸಿತ್ತು. ಭಾರತದಲ್ಲಿ ನಡೆದ 3ನೇ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಅಳಿಸಲಾಗದ ಶಾಯಿ ಪೂರೈಸಲಾಗಿತ್ತು. ಅಂದಿನಿಂದಲೂ ಇಂದಿನವರೆಗೂ ಭಾರತದಲ್ಲಿ ನಡೆಯುವ ಚುನಾವಣೆಗೆ ಮೈ ಲ್ಯಾಕ್ ಅಳಿಸಲಾಗದ ಶಾಯಿಯನ್ನು ಪೂರೈಸುತ್ತ ಬಂದಿದ್ದು ಇದಲ್ಲದೆ ವಿದೇಶಕ್ಕೂ ಸಹ ಶಾಯಿಯನ್ನು ರವಾನಿಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ