ಪಕ್ಷದಿಂದ ಹೊರಹೋಗಿದ್ದವರನ್ನು ಪುನಃ ಸೇರ್ಪಡೆ ವಿಚಾರ-ಪ್ರಭಾವಿ ನಾಯಕರ ನಡುವೆ ನಡೆದ ಮುಸುಕಿನ ಗುದ್ದಾಟ

ಬೆಂಗಳೂರು,ಮಾ.11- ಪಕ್ಷದಿಂದ ಹೊರಹೋಗಿದ್ದವರನ್ನು ಪುನಃ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಬಿಜೆಪಿಯ ಬೆಂಗಳೂರಿನ ಪ್ರಭಾವಿ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆದಿರುವುದು ಬೆಳಕಿಗೆ ಬಂದಿದೆ.

ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದ ಬಿಬಿಎಂಪಿ ಮಾಜಿ ಸದಸ್ಯರಾದ ಗೋಪಿ ಮತ್ತು ಶರವಣ ಅವರನ್ನು ಪಕ್ಷಕ್ಕೆ ಕರೆತರಲು ಆರ್.ಅಶೋಕ್ ಮತ್ತು ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಮುಂದಾಗಿರುವುದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಣ್ಣು ಕೆಂಪಾಗುವಂತೆ ಮಾಡಿದೆ.

ಇದರಿಂದ ಬೇಸತ್ತಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಒಂದು ವೇಳೆ ಗೋಪಿ ಮತ್ತು ಶರವಣ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರೆ ನನಗೆ ಪಕ್ಷದ ಸಹವಾಸವೇ ಬೇಡ. ಲೋಕಸಭೆ ಚುನಾವಣೆಯ ಪ್ರಕ್ರಿಯೆಯಿಂದಲೇ ದೂರ ಉಳಿಯುತ್ತೇನೆ ಎಂದು ಮುಖಂಡರ ಬಳಿ ಬೆದರಿಕೆ ಹಾಕಿದ್ದಾರೆ.

ಹೀಗಾಗಿ ಸೋಮವಾರ ರಾಮನಗರದಲ್ಲಿ ನಡೆಯಬೇಕಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮುಖಂಡರ ಸಭೆಯನ್ನು ಮುಂದೂಡಲಾಗಿದೆ.

ಈಗಾಗಲೇ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಮಾತನಾಡಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ ಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ರೋಷನ್ ಬೇಗ್ ಪರ ಪ್ರಚಾರ ನಡೆಸಿದ ಇವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ನಾಯ್ಡು ಸ್ಪಷ್ಟ ಮಾತುಗಳಲ್ಲೇ ಹೇಳಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಗಳಿಂದ ಅಸಮಾಧಾನಗೊಂಡಿರುವ ಯಡಿಯೂರಪ್ಪ , ಯಾರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಯಾರೂ ಕೂಡ ಪಕ್ಷಕ್ಕೆ ಹಾನಿಯಾಗುವಂತಹ ಚಟುವಟಿಕೆಗಳನ್ನು ನಡೆಸಬಾರದೆಂದು ಸೂಚಿಸಿದ್ದಾರೆ.

ಉಸ್ತುವಾರಿ ಸಮ್ಮುಖದಲ್ಲಿ ಕಿತ್ತಾಟ:
ಶನಿವಾರ ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಮುಖಂಡರ ಸಭೆಯನ್ನು ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ನೇತೃತ್ವದಲ್ಲಿ ಕರೆಯಲಾಗಿತ್ತು. ಈ ವೇಳೆ ಬೆಂಗಳೂರು ಮುಖಂಡರಾದ ಆರ್.ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸುಬ್ಬಣ್ಣ , ಸದಾಶಿವ, ಅರವಿಂದ ಲಿಂಬಾವಳಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಈ ವೇಳೆ ಆರ್.ಅಶೋಕ್, ಪಿ.ಸಿ.ಮೋಹನ್ ಅವರು ವಿಷಯ ಪ್ರಸ್ತಾಪಿಸಿ ಗೋಪಿ ಮತ್ತು ಶರವಣ ಅವರು ಬಿಜೆಪಿಗೆ ಬರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅವರು ಪಕ್ಷಕ್ಕೆ ಬಂದರೆ ಶಿವಾಜಿನಗರ, ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಮತ್ತು ಬೆಂಗಳೂರು ಸೆಂಟ್ರಲ್‍ನಲ್ಲಿ ನಮ್ಮ ಗೆಲುವಿಗೆ ಸಹಕಾರಿಯಾಗಬಹುದೆಂಬ ಅಭಿಪ್ರಾಯವನ್ನು ಹೊರ ಹಾಕಿದರು.

ಇದರಿಂದ ಸಿಟ್ಟಿಗೆದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಈ ಇಬ್ಬರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ.

ರೋಷನ್‍ಬೇಗ್ ಜೊತೆ ಕೈ ಜೋಡಿಸಿದ್ದರಿಂದ ನನಗೆ ಹಿನ್ನಡೆಯಾಯಿತು. ಇಂಥವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಕಾರ್ಯಕರ್ತರಿಗೆ ಏನು ಸಂದೇಶ ಕೊಡಬೇಕೆಂದು ಏರಿದ ಧ್ವನಿಯಲ್ಲಿ ಅಶೋಕ್ ವಿರುದ್ಧ ಹರಿಹಾಯ್ದರು.

ಈ ವೇಳೆ ಕಟ್ಟಾ ಬೆಂಬಲಕ್ಕೆ ಸುಬ್ಬಣ್ಣ, ಸದಾಶಿವ, ಲಿಂಬಾವಳಿ ನಿಂತರೆ ಪಿ.ಸಿ.ಮೋಹನ್ ಅವರು ಅಶೋಕ್ ಪರವಾಗಿ ಮಾತನಾಡಿದರು. ಒಂದು ಹಂತದಲ್ಲಿ ಮುರುಳೀಧರ್ ರಾವ್ ಸಮ್ಮುಖದಲ್ಲೇ ನಾಯಕರು ಏರಿದ ಧ್ವನಿಯಲ್ಲಿ ಕಿತ್ತಾಡಿಕೊಂಡು ಸಭೆಯಿಂದ ಅರ್ಧಕ್ಕೆ ನಿರ್ಗಮಿಸಿದ್ದರೆಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಬೆಳವಣಿಗೆಯಿದ ಬೇಸತ್ತ ನಾಯ್ಡು ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಲಿಲ್ಲ. ರಾಮನಗರ ಜಿಲ್ಲೆಯ ಪ್ರಭಾರಿಯಾಗಿರುವ ಅವರು ಸೋಮವಾರ ಕರೆದಿದ್ದ ಸಭೆಯನ್ನು ಮುಂದೂಡಿದ್ದಾರೆ.

ಹೀಗೆ ಬೆಂಗಳೂರು ನಾಯಕರಲ್ಲೇ ವೈಮನಸ್ಸು ಮೂಡಿರುವುದರಿಂದ ಯಡಿಯೂರಪ್ಪ ಮೂರ್ನಾಲ್ಕು ದಿನಗಳಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ಮುರಿದ ಮನಸ್ಸುಗಳನ್ನು ಒಗ್ಗೂಡಿಸುವ ಯತ್ನಕ್ಕೆ ಕೈ ಹಾಕಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ