ಬೆಂಗಳೂರು: ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನಿಗದಿಸಿದ್ದು, ಇಂದಿನಿಂದ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಾಗಲಿದೆ. ಚುನಾವಣೆಗೆ ಸರಿಯಾಗಿ ಒಂದು ತಿಂಗಳು ಬಾಕಿಯಿದ್ದು, ಮೂರು ಪಕ್ಷಗಳ ನಾಯಕರು ಮತದಾರರನ್ನು ಸೆಳೆಯಲು ಸಜ್ಜಾಗಿದ್ದಾರೆ.
ಮತದಾರರನ್ನು ಸೆಳೆಯಲು ಈಗಾಗಲೇ ತಯಾರಿ ನಡೆಸಿರುವ ಮೂರು ಪಕ್ಷಗಳು ಹೆಚ್ಚು ಸ್ಥಾನಗಳಿಸಲು ಭರ್ಜರಿ ತಯಾರಿ ಆರಂಭಿಸಿದ್ದಾರೆ. ವಿಜಯಸಂಕಲ್ಪ ಯಾತ್ರೆ ಮೂಲಕ ರಾಜ್ಯವನ್ನು ಸುತ್ತುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ 20ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಐದು ವರ್ಷಗಳ ಮೋದಿ ಸರ್ಕಾರದ ಸಾಧನೆಯನ್ನು ಅಸ್ತ್ರವಾಗಿ ಬಳಸಿ ಬಿಜೆಪಿ ಮತ ಕೇಳಲು ಸಿದ್ಧವಾಗಿದೆ.
ಈಗಾಗಲೇ ರಾಜ್ಯದ ಅನೇಕ ಕಡೆ ಪ್ರಚಾರ ಆರಂಭಿಸಿರುವ ನಾಯಕರು ಮೋದಿ ವರ್ಚಸ್ಸನ್ನು ಮತ್ತೊಮ್ಮೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಪ್ರತಿ ಮನೆಗೂ ಬಿಜೆಪಿಯ ಸಾಧನೆಗಳನ್ನು ತಿಳಿಸುವ ಮೂಲಕ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಬಲಗೊಳಿಸುವಂತೆ ಈಗಾಗಲೇ ಕೇಂದ್ರದಿಂದ ಸೂಚನೆ ಬಂದಿದ್ದು, ಯಡಿಯೂರಪ್ಪ ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯ ಸುತ್ತುತ್ತಿದ್ದಾರೆ. ಇನ್ನು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಮಾಡಿರುವ ಬಿಜೆಪಿ ಹೈಕಮಾಂಡ್ ಅನುಮತಿಗಾಗಿ ಕಾದಿದೆ. ಈ ನಡುವೆ ಹಾಲಿ ಹಾಗೂ ಮಾಜಿ ನಾಯಕರು ಕೂಡ ಪ್ರಚಾರ ಆರಂಭಿಸಲು ಸಜ್ಜಾಗಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ಸದಾ ಹರಿಹಾಯುತ್ತಿರುವ ಕಾಂಗ್ರೆಸ್ ಎನ್ಡಿಎ ಸರ್ಕಾರದ ವೈಫಲ್ಯಗಳನ್ನೇ ಇಟ್ಟುಕೊಂಡು ಜನರ ಮುಂದೆ ಹೋಗಲು ಸಿದ್ಧತೆ ನಡೆಸಿದ್ದಾರೆ. ರಫೇಲ್ , ನಿರುದ್ಯೋಗ ಸಮಸ್ಯೆ ಸೇರಿದಂತೆ ಅನೇಕ ವಿಷಯಗಳು ಕಾಂಗ್ರೆಸ್ ಬತ್ತಳಿಕೆಯಲ್ಲಿದೆ. ಇತ್ತ ರಾಜ್ಯದಲ್ಲಿ ಆಪರೇಷನ್ ಕಮಲ ಮಾಡಲು ಹೋಗಿ ಮುಜುಗರ ಅನುಭವಿಸುವ ವಿಚಾರವನ್ನು ಕೂಡ ಕಾಂಗ್ರೆಸ್ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್ ಎಲ್ಲಾ ಜಿಲ್ಲೆಗಳಲ್ಲಿ ಸಮಾವೇಶ ನಡೆಸಲು ಸಿದ್ಧವಾಗಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಪ್ರಚಾರಕ್ಕೆ ತರಲು ಸಿದ್ಧವಾಗಿದ್ದಾರೆ. ಜೆಡಿಎಸ್ ಜೊತೆಗೆ ಸೀಟು ಹಂಚಿಕೆಯಲ್ಲಿ ಹಗ್ಗಜಗ್ಗಾಟ ನಡೆಸಿರುವ ಕಾಂಗ್ರೆಸ್ ಕೂಡ ಇಂದು ನಾಳೆಯೊಳಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಮೈತ್ರಿ ಹಾಗೂ ಮಹಾಘಟಬಂಧನ್ ಸಹಾಯದಿಂದ ಜೆಡಿಎಸ್ ಕೂಡ ಗೆಲುವಿನ ಹವಣಿಕೆಯಲ್ಲಿದೆ. ಕಾಂಗ್ರೆಸ್ ನಾಯಕರ ಸಹಾಯದಿಂದ ಆರು ಸ್ಥಾನಗಳಲ್ಲಿ ಗೆಲುವಿಗೆ ಯೋಜನೆ ರೂಪಿಸಲಾಗಿದೆ. ಇನ್ನು ಗೌಡರ ಕುಟುಂಬದಿಂದಲೇ ಈ ಬಾರಿ ಮೂವರು ಅಭ್ಯರ್ಥಿಗಳ ಕಣಕ್ಕೆ ಇಳಿಯಲಿದ್ದು, ಪ್ರಜ್ವಲ್ ಹಾಗೂ ನಿಖಿಲ್ ಸ್ಪರ್ಧೆ ಬಗ್ಗೆ ಜೆಡಿಎಸ್ ಇನ್ನು ಅಧಿಕೃತಗೊಳಿಸಿಲ್ಲ.