ಬೆಂಗಳೂರು, ಮಾ.11- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೂ ಯಾವುದೇ ರೀತಿಯ ಭಯಪಡದೆ ದೊಡ್ಡವರ ಜತೆ ಸ್ಪರ್ಧೆ ಮಾಡಲು ನಾನು ಸಿದ್ಧನಾಗಿದ್ದೇನೆ ಎಂದು ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದರು.
ಇದುವರೆಗೂ ನನಗಿಂತ ಚಿಕ್ಕವರ ಜತೆ ಸ್ಪರ್ಧೆ ಮಾಡಿ ಗೆದ್ದಿದ್ದೇನೆ. ಒಂದು ವೇಳೆ ದೇವೇಗೌಡರು ಸ್ಪರ್ಧಿಸಿದರೂ ನನಗೆನೂ ಭಯವಿಲ್ಲ. ಅದನ್ನು ಗೌರವಯುತವಾಗಿ ಸ್ವೀಕರಿಸಿ ಗೆಲ್ಲುವ ವಿಶ್ವಾಸ ನನಗಿದೆ ಎಂದರು.
ತಮ್ಮ ಐದು ವರ್ಷಗಳ ಮೌಲ್ಯಮಾಪನ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬೇರೊಂದು ಕಡೆ ವಲಸೆ ಹೋಗುತ್ತೇನೆ ಎಂದು ಸುದ್ದಿ ಹಬ್ಬಿಸುತ್ತಿರುವವರು ದೇಶ ದ್ರೋಹಿಗಳು. ಪಕ್ಷ ಟಿಕೆಟ್ ನೀಡಿದರೆ ಅಲ್ಲಿಂದಲೇ ಸ್ಪರ್ಧಿಸುತ್ತೇನೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ನನಗೆ ಮುಖ್ಯ ಹೊರತು. ನನ್ನ ಹಿತಾಸಕ್ತಿ ಮುಖ್ಯವಲ್ಲ ಎಂದು ಪುನರುಚ್ಛರಿಸಿದರು.
ಕಳೆದ ಫೆ.3ರಿಂದಲೇ ಚುನಾವಣಾ ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಕ್ಷೇತ್ರದ ಪ್ರಮುಖರು, ಪ್ರಭಾವಿಗಳು, ಮುಖಂಡರು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರು ಈಗಾಗಲೇ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಬೇರೆ ಪಕ್ಷಗಳಿಗಿಂತ ಬಿಜೆಪಿ ಯಾವಾಗಲೂ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುತ್ತದೆ. ಬೇರೆಯವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಮಾಡಿರುವ ಕೆಲಸಗಳೇ ನಮಗೆ ಶ್ರೀರಕ್ಷೆಯಾಗುತ್ತದೆ. ಬೆಂಗಳೂರು ಉತ್ತರ ವಿಭಾಗದ ಜನತೆ ನನ್ನನ್ನು ಮತ್ತೊಮ್ಮೆ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ತಾವು ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು. ನಾನು ಕೇಂದ್ರ ಸಚಿವನಾಗಿ ಈ ಭಾಗದ ಜನತೆಗೆ ಯಾವೆಲ್ಲ ಆಶ್ವಾಸನೆ ಕೊಟ್ಟಿದ್ದೆನೋ ಅದನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಶೌಚಾಲಯ, ಸ್ತ್ರೀ ಶಕ್ತಿ ಸಂಘಟನೆಗಳ ಸಬಲೀಕರಣ ಸೇರಿದಂತೆ ನಾನಾ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ನಾವು ಏನು ಮಾಡಿದ್ದೇವೆ ಎಂಬುದನ್ನು ಮೌಲ್ಯಮಾಪನದ ಮೂಲಕ ತಿಳಿಸಬೇಕೆಂದು ಸೂಚಿಸಿದ್ದರು. ಇದರಂತೆ ಐದು ವರ್ಷಗಳ ಅವಧಿಯಲ್ಲಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟನ್ನು ಈಡೇರಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ರಕ್ಷಣಾ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಅಂಡರ್ ಪಾಸ್ ನಿಲ್ದಾಣ, ರೈಲ್ವೆ ಕ್ರಾಸಿಂಗ್, ರಸ್ತೆಗಳ ಅಗಲೀಕರಣ, ಕುಡಿಯುವ ನೀರು, ಚರಂಡಿ, ಕಾಲುವೆ ಸೇರಿದಂತೆ ಕ್ಷೇತ್ರದಲ್ಲಿ ಹಲವು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಯತ್ನಿಸುತ್ತೇನೆ. ರಕ್ಷಣಾ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಸಾಧ್ಯವಾಗದ ಕೆಲಸವನ್ನು ನಾನು ಸಚಿವನಾದ ಮೇಲೆ ಮಾಡಿಕೊಟ್ಟಿದ್ದೇನೆ. ಯಶವಂತಪುರದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ, ಜಾಲಹಳ್ಳಿಯಲ್ಲಿ ಪಾಸ್ಪೋರ್ಟ್ ಕೇಂದ್ರ ಕಚೇರಿ, ಜನೌಷಧಿ ಕೇಂದ್ರ ಸ್ಥಾಪನೆ, ಆನ್ಲೈನ್ ಮೂಲಕ ಜನೌಷಧಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ, 12 ಆದರ್ಶ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟಿರುವುದಾಗಿ ತಿಳಿಸಿದರು.