ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಮುಂದಾದ ಬಿಜೆಪಿ

ಬೆಂಗಳೂರು, ಮಾ.11- ರಾಜ್ಯದಲ್ಲಿ ಈ ಬಾರಿ ಎರಡು ಹಂತದ ಚುನಾವಣೆ ನಡೆಯಲಿದೆ. 14 ಲೋಕಸಭಾ ಕ್ಷೇತ್ರಗಳಿಗೆ ಏ.18 ಮತ್ತು 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ 23ರಂದು ಮತದಾನವಾಗಲಿದೆ.

ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಇನ್ನು ವಿಳಂಬ ಮಾಡದೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಬಿಜೆಪಿ ಮುಂದಾಗಿದೆ.

ಕಳೆದವಾರವಷ್ಟೇ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ದೆಹಲಿಗೆ ತೆರಳಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ನೀಡಿದ್ದರು.

ಹಾಲಿ 15 ಸಂಸದರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ನಿಧನದಿಂದ ತೆರವಾಗಿರುವ ಬೆಂಗಳೂರು ದಕ್ಷಿಣಕ್ಕೆ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಸ್ಪರ್ಧಿಸುವುದು ಖಚಿತವಾಗಿದೆ.

ಕೊನೆ ಕ್ಷಣದಲ್ಲಿ ಅವರು ಸ್ಪರ್ಧೆಗೆ ಹಿಂದೇಟು ಹಾಕಿದರೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಣೆ ಹಾಕಲು ಬಿಜೆಪಿ ತೀರ್ಮಾನಿಸಿದೆ.

ಪ್ರತಿಷ್ಟೆಯ ಕಣವಾಗಿರುವ ಚಿಕ್ಕೋಡಿ ವಿಧಾನಸಭಾ ಕ್ಷೇತ್ರಕೆ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಮಾಜಿ ಸಂಸದ ರಮೇಶ್ ಕತ್ತಿ ಒಂದು ವೇಳೆ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಬಂದರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೊನೆ ಕ್ಷಣದಲ್ಲಿ ಅಭ್ಯರ್ಥಿಯಾಗುವ ಸಂಭವವಿದೆ.

ಬಳ್ಳಾರಿಯಿಂದ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರ ಸಹೋದರ ಪ್ರಸಾದ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪನವರ ಪುತ್ರ ಮಾಜಿ ಶಾಸಕ ಸುರೇಶ್ ಬಾಬು ಹೆಸರುಗಳು ಚಾಲ್ತಿಯಲ್ಲಿವೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರತಿನಿಧಿಸುವ ಹಾಸನದಿಂದ ಮಾಜಿ ಸಚಿವ ಎ.ಮಂಜು ಬಿಜೆಪಿಗೆ ಬಂದರೆ ಅವರೇ ಅಭ್ಯರ್ಥಿಯಾಗಲಿದ್ದಾರೆ.

ಬೆಂಗಳೂರು ಗ್ರಾಮಾಂತರದಿಂದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ಕಣಕ್ಕಿಳಿಯುವ ಸಾಧ್ಯತೆ ಇದೆ.

ತುಮಕೂರಿನಿಂದ ಮಾಜಿ ಸಂಸದ ಜಿ.ಎಚ್.ಬಸವರಾಜ್ , ಚಿತ್ರದುರ್ಗದಿಂದ ಮಾಜಿ ಸಂಸದ ಜನಾರ್ಧನ ಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ, ಮಂಡ್ಯದಿಂದ ಸುಮಲತಾ ಪಕ್ಷೇತರ ಅಭ್ಯರ್ಥಿಯಾದರೆ ಬೆಂಬಲ ನೀಡುವ ಸಾಧ್ಯತೆಗಳ ಬಗ್ಗೆ ಪಕ್ಷದ ವಲಯದಲ್ಲಿ ಚಿಂತನೆ ನಡೆದಿದೆ.

ಈಗಾಗಲೇ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ಫೈನಲ್ ಪಟ್ಟಿ ಹೈಕಮಾಂಡ್ ಅಂಗಳ ತಲುಪಿದೆ. ಹಾಲಿ ಸಂಸದರಿಗೆ ಟಿಕೇಟ್ ಬಹುತೇಕ ಪಕ್ಕಾ ಎಂದು ಬಿಎಸ್‍ವೈ ಸುಳಿವು ನೀಡಿರುವುದು ಹಾಗೂ ಇನ್ನುಳಿದ ಕ್ಷೇತ್ರಗಳ ಟಿಕೇಟ್ ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದೆ.

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
1. ಬೆಳಗಾವಿ-ಸುರೇಶ್ ಅಂಗಡಿ ಹಾಲಿ ಸಂಸದ
2. ಚಿಕ್ಕೋಡಿ-ಸದಲಗಾ- ರಮೇಶ್ ಕತ್ತಿ/ಪ್ರಭಾಕರ್ ಕೋರೆ
3. ಬಾಗಲಕೋಟೆ -ಪಿ.ಸಿ.ಗದ್ದೀಗೌಡರ್ ಹಾಲಿ ಸಂಸದ
4. ವಿಜಯಪುರ- ರಮೇಶ್ ಜಿಗಜಿಣಗಿ ಹಾಲಿ ಸಂಸದ
5. ಬೀದರ್- ಭಗವಂತ ಖೂಬಾ ಹಾಲಿ ಸಂಸದ.
6. ರಾಯಚೂರು- ಸಣ್ಣ ಫಕೀರಪ್ಪ/ಶಿವನಗೌಡ ನಾಯಕ್
7. ಕಲಬುರಗಿ- ಡಾ.ಉಮೇಶ್ ಜಾಧವ್
8. ಕೊಪ್ಪಳ-ಕರಡಿ ಸಂಗಣ್ಣ ಹಾಲಿ ಸಂಸದ
9. ಬಳ್ಳಾರಿ- ವೆಂಕಟೇಶ್ ಪ್ರಸಾದ್/ ಲಖನ್ ಜಾರಕಿಹೊಳಿ
10. ಚಿತ್ರದುರ್ಗ- ಮಾದಾರ ಚೆನ್ನಯ್ಯ /ಲಕ್ಷ್ಮಿನಾರಾಯಣ
11. ಕೋಲಾರ- ಡಿ.ಎಸ್.ವೀರಯ್ಯ/ ನಾರಾಯಣಸ್ವಾಮಿ
12. ತುಮಕೂರು- ಜೆ.ಹೆಚ್.ಬಸವರಾಜ್/ ಸುರೇಶ್ ಗೌಡ
13. ಬೆಂಗಳೂರು ದಕ್ಷಿಣ-ಡಾ.ತೇಜಸ್ವಿನಿ ಅನಂತಕುಮಾರ್ ಅನಂತ್ ಕುಮಾರ್ ಪತ್ನಿ
14. ಬೆಂಗಳೂರು ಉತ್ತರ- ಡಿ.ವಿ.ಸದಾನಂದಗೌಡ ಹಾಲಿ ಸಂಸದ
15. ಬೆಂಗಳೂರು ಕೇಂದ್ರ- ಪಿ.ಸಿ.ಮೋಹನ್ ಹಾಲಿ ಸಂಸದ
16. ಬೆಂಗಳೂರು ಗ್ರಾಮಾಂತರ- ತೇಜಸ್ವಿನಿ ರಮೇಶ್ / ಸಿ.ಪಿ.ಯೋಗೇಶ್ವರ್/ ರುದ್ರೇಶ್
17. ಮೈಸೂರು-ಕೊಡಗು – ಪ್ರತಾಪ್ ಸಿಂಹ ಹಾಲಿ ಸಂಸದ
18. ಮಂಡ್ಯ- ಡಾ.ಎಲ್. ಸಿದ್ಧರಾಮಯ್ಯ/ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್‍ಗೆ ಬೆಂಬಲ ಸಾಧ್ಯತೆ.
19. ಚಾಮರಾಜನಗರ- ಎಂ.ಶಿವಣ್ಣ/ವಿ.ಶ್ರೀನಿವಾಸ ಪ್ರಸಾದ್
20. ದಾವಣಗೆರೆ- ಜಿ.ಎಂ.ಸಿದ್ದೇಶ್ವರ್ ಹಾಲಿ ಸಂಸದ
21. ಶಿವಮೊಗ್ಗ – ಬಿ.ವೈ. ರಾಘವೇಂದ್ರ ಹಾಲಿ ಸಂಸದ
22. ಹಾವೇರಿ-ಗದಗ- ಶಿವಕುಮಾರ್ ಉದಾಸಿ ಹಾಲಿ ಸಂಸದ
23. ಧಾರವಾಡ-ಹುಬ್ಬಳ್ಳಿ- ಪ್ರಹ್ಲಾದ್ ಜೋಷಿ ಹಾಲಿ ಸಂಸದ
24. ಉತ್ತರ ಕನ್ನಡ – ಅನಂತಕುಮಾರ್ ಹೆಗಡೆ ಹಾಲಿ ಸಂಸದ
25. ಉಡುಪಿ-ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ ಹಾಲಿ ಸಂಸದೆ
26. ದಕ್ಷಿಣ ಕನ್ನಡ- ನಳಿನ್‍ಕುಮಾರ್ ಕಟೀಲು ಹಾಲಿ ಸಂಸದ
27. ಹಾಸನ – ಎ.ಮಂಜು/ಪ್ರೀತಂಗೌಡ/ಸಿ.ಟಿ.ರವಿ
28. ಚಿಕ್ಕಬಳ್ಳಾಪುರ- ಬಿ.ಎನ್. ಬಚ್ಚೇಗೌಡ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ