ಬೆಂಗಳೂರು,ಮಾ.11-ಪಕ್ಷದ ವರಿಷ್ಠರ ತೀರ್ಮಾನದಿಂದ ಬೇಸತ್ತ ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಎ.ಮಂಜು ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ.
ಯಾವುದೇ ಸಂದರ್ಭದಲ್ಲಿ ಅವರು ಕಾಂಗ್ರೆಸ್ಗೆ ಕೈಕೊಟ್ಟು ಬಿಜೆಪಿಯ ಕಮಲವನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ಈಗಾಗಲೇ ಪಕ್ಷ ಸೇರ್ಪಡೆ ಕುರಿತಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮುಖಂಡರಾದ ಆರ್.ಅಶೋಕ್ ಸೇರಿದಂತೆ ಮತ್ತಿತರರ ಜೊತೆ ಮಾತುಕತೆ ನಡೆದಿದೆ.
ಎ.ಮಂಜು ಬಿಜೆಪಿಗೆ ಸೇರ್ಪಡೆಯಾದರೆ ಹಾಸನ ಲೋಕಸಭಾ ಕ್ಷೇತ್ರದಿಂದ ಅವರು ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಹಾಸನ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವುದಾದರೆ ಈ ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿದರೆ ಮಾತ್ರ ಅವರಿಗೆ ಬೆಂಬಲ ನೀಡುವೆ. ಅದನ್ನು ಬಿಟ್ಟು ಬೇರೆ ಯಾರಿಗೇ ಟಿಕೆಟ್ ನೀಡಿದರೆ ನಾನು ಬೆಂಬಲ ನೀಡುವುದಿಲ್ಲ ಎಂದು ಮಂಜು ಹೇಳಿದ್ದರು.
ಮೈತ್ರಿ ಒಪ್ಪಂದದ ಪ್ರಕಾರ ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡಬಾರದೆಂಬ ತೀರ್ಮಾನಕ್ಕೆ ಉಭಯ ಪಕ್ಷಗಳು ಬಂದಿವೆ. ಹೀಗಾಗಿ ಹಾಸನದಿಂದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.
ಶನಿವಾರವಷ್ಟೇ ಎ.ಮಂಜು, ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಬಿಜೆಪಿ ಸೇರ್ಪಡೆ ಕುರಿತಂತೆ ಈವರೆಗೆ ನಡೆದಿರುವ ಮಾತುಕತೆಗಳು ಸಕಾರಾತ್ಮಕವಾಗಿ ನಡೆದಿದೆ. ಮಂಜು ಅವರನ್ನು ಪಕ್ಷಕ್ಕೆ ಕರೆತರಲು ಶಾಸಕರಾದ ಸಿ.ಟಿ.ರವಿ, ಪ್ರೀತಂಗೌಡ ಸೇರಿದಂತೆ ಕೆಲವು ಒಕ್ಕಲಿಗ ಸಮುದಾಯ ಮುಖಂಡರು ವಿಶೇಷ ಮುತುವರ್ಜಿ ವಹಿಸಿದ್ದಾರೆ.
ಹಾಸನದಲ್ಲಿ ಬಿಜೆಪಿ ಸಂಘಟನೆ ಕೊರತೆ ಎದುರಿಸುತ್ತಿದೆ. ಈ ಬಾರಿ ಜಿಲ್ಲೆಯಲ್ಲಿ ಒಂದು ಕ್ಷೇತ್ರವನ್ನು ಗೆದ್ದಿದ್ದರೂ ಹೇಳಿಕೊಳ್ಳುವಂತಹ ಸಂಘಟನೆಯಿಲ್ಲ. ಎ.ಮಂಜು ಮೂಲತಃ ಬಿಜೆಪಿಯವರು.
ಈ ಹಿಂದೆ ವಿಜಯ್ಮಲ್ಯ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ ವೇಳೆ ಅಡ್ಡ ಮತದಾನ ಮಾಡಿದರೆಂಬ ಕಾರಣಕ್ಕಾಗಿ ಎ.ಮಂಜು ಸೇರಿದಂತೆ ಮತ್ತಿತರರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ಈಗ ಎಲ್ಲವೂ ಸರಿ ಹೋಗಿರುವುದರಿಂದ ಮಂಜು ಬಿಜೆಪಿಗೆ ಸೇರ್ಪಡೆಯಾಗಲು ವೇದಿಕೆ ಸಿದ್ಧಗೊಂಡಿದೆ.