ಮೈತ್ರಿ ಪಕ್ಷಗಳ ನಡುವೆ ಮುಂದುವರೆದ ಸೀಟು ಹಂಚಿಕೆ ಹಗ್ಗಜಗ್ಗಾಟ

ಬೆಂಗಳೂರು, ಮಾ.11- ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್-ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಅಂತಿಮಗೊಳ್ಳದೆ ಹಗ್ಗಜಗ್ಗಾಟ ಮುಂದುವರೆದಿದೆ.

ಜೆಡಿಎಸ್ 12 ಕ್ಷೇತ್ರಗಳಿಗೆ ಪಟ್ಟು ಹಿಡಿದಿದ್ದು, ಕೊನೆಗೆ 9 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್ ಮುಂದೆ ಪ್ರಸ್ತಾವನೆ ಇಟ್ಟಿದೆ. ಈ ಮೊದಲು ಬೆಂಗಳೂರಿನಲ್ಲಿ ಸಚಿವ ಎಚ್.ಡಿ.ರೇವಣ್ಣ, ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಉಪಮುಖ್ಯಮಂತ್ರಿ ಪರಮೇಶ್ವರ ಅವರ ನಡುವೆ ನಡೆದ ಸಭೆ ಮತ್ತು ದೆಹಲಿಯಲ್ಲಿ ರಾಹುಲ್‍ಗಾಂಧಿ ಹಾಗೂ ದೇವೇಗೌಡರ ಜನತೆ ನಡೆದ ಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆ ಬಹುತೇಕ ನಿರ್ಧಾರಗಳಾಗಿವೆ.

ಮೂಲಗಳ ಪ್ರಕಾರ ಜೆಡಿಎಸ್‍ಗೆ ಮಂಡ್ಯ, ಹಾಸನ, ಬೆಂಗಳೂರು ಉತ್ತರ, ಶಿವಮೊಗ್ಗ, ಉತ್ತರ ಕನ್ನಡ, ವಿಜಯಪುರ ಕ್ಷೇತ್ರಗಳನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ.

ಪ್ರಮುಖವಾಗಿ ಮೈಸೂರು ಕ್ಷೇತ್ರವನ್ನು ಜೆಡಿಎಸ್ ಕೇಳುತ್ತಿದ್ದು, ಸಿದ್ದರಾಮಯ್ಯ ಕಾಂಗ್ರೆಸ್‍ನಿಂದಲೇ ಮೈಸೂರಿಗೆ ಅಭ್ಯರ್ಥಿ ಕಣಕ್ಕಿಳಿಸಲು ಪಟ್ಟು ಹಿಡಿದಿದ್ದಾರೆ.

ಕಾಂಗ್ರೆಸ್‍ನ ಹಾಲಿ ಸಂಸದರಿರುವ ಚಿಕ್ಕಬಳ್ಳಾಪುರ, ತುಮಕೂರು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಆದರೆ, ಅದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್‍ನ ಹಾಲಿ ಸಂಸದರ ಕ್ಷೇತ್ರವನ್ನು ಕೇಳುವುದಾದರೆ ಜೆಡಿಎಸ್‍ನ ಸಂಸದರಿರುವ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡುವಂತೆ ಪಕ್ಷ ಪಟ್ಟು ಹಿಡಿದಿದೆ.

ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅಭ್ಯರ್ಥಿಯಾಗುತ್ತಿದ್ದು, ಯಾವುದೇ ಕಾರಣಕ್ಕೂ ಈ ಕ್ಷೇತ್ರವನ್ನು ಬಿಟ್ಟುಕೊಡಲು ಜೆಡಿಎಸ್ ತಯಾರಿ ಇಲ್ಲ. ಹೀಗಾಗಿ ಪರಸ್ಪರ ಹೊಂದಾಣಿಕೆ ಮೂಲಕ ಹಾಲಿ ಸಂಸದರ ಕ್ಷೇತ್ರಗಳು ಯಥಾವತ್ತು ಉಳಿಯಲಿವೆ.

ಮೈಸೂರು ಕ್ಷೇತ್ರದ ಸಂಬಂಧವಾಗಿ ಚೌಕಾಸಿ ನಡೆಯುತ್ತಿದೆ. ಇದರ ಹೊರತಾಗಿಯೂ ಕಾಂಗ್ರೆಸ್ 15 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದ್ದು, ಅದು ದೆಹಲಿಯಲ್ಲಿಂದು ಚರ್ಚೆಯಾಗಿ ಅಂತಿಮವಾಗಿ ಅಭ್ಯರ್ಥಿಗಳು ಆಯ್ಕೆಗೊಳ್ಳುವ ಸಾಧ್ಯತೆಗಳಿವೆ.

ಕಾಂಗ್ರೆಸ್‍ನ ಹಾಲಿ ಸಂಸದರು:
ಚಿಕ್ಕೋಡಿ-ಪ್ರಕಾಶ್ ಹುಕ್ಕೇರಿ
ಕಲಬುರ್ಗಿ-ಮಲ್ಲಿಕಾರ್ಜುನ ಖರ್ಗೆ
ರಾಯಚೂರು-ಬಿ.ವಿ.ನಾಯಕ್
ಬಳ್ಳಾರಿ-ವಿ.ಎಸ್.ಉಗ್ರಪ್ಪ
ಚಿತ್ರದುರ್ಗ-ಬಿ.ಎನ್.ಚಂದ್ರಪ್ಪ
ತುಮಕೂರು-ಎಸ್.ಪಿ.ಮುದ್ದಹನುಮೇಗೌಡ
ಚಾಮರಾಜನಗರ-ಆರ್.ಧ್ರುವನಾರಾಯಣ್
ಬೆಂಗಳೂರು ಗ್ರಾಮಾಂತರ-ಡಿ.ಕೆ.ಸುರೇಶ್
ಚಿಕ್ಕಬಳ್ಳಾಪುರ-ಎಂ.ವೀರಪ್ಪಮೊಯ್ಲಿ
ಕೋಲಾರ-ಕೆ.ಎಚ್.ಮುನಿಯಪ್ಪ
ಸಂಭವನೀಯ ಅಭ್ಯರ್ಥಿಗಳು:
ಬೆಳಗಾವಿ-ಅಂಜಲಿ ನಿಂಬಾಳ್ಕರ್
ಬಾಗಲಕೋಟೆ-ನಾಗರಾಜ್‍ಯಾಧವ್
ವಿಜಯಪುರ-ವಿವೇಕ್‍ರಾವ್‍ಪಾಟೀಲ್
ಬೀದರ್-ಈಶ್ವರ್‍ಖಂಡ್ರೆ, ವಿಜಯ್‍ಸಿಂಗ್, ಸಿ.ಎಂ.ಇಬ್ರಾಹಿಂ
ಕೊಪ್ಪಳ-ಬಸವನಗೌಡ ಬಾದರ್ಲಿ, ವಿರೂಪಾಕ್ಷಪ್ಪ, ಬಸವರಾಜ್ ಹಿಟ್ನಾಳ್, ಬಸವರಾಜ್ ರಾಯರೆಡ್ಡಿ
ಹಾವೇರಿ-ಬಿ.ಆರ್.ಪಾಟೀಲ್, ಬಸವರಾಜ್ ಶಿವಣ್ಣನವರ್, ಸಲೀಂ ಅಹಮ್ಮದ್
ಧಾರವಾಡ-ಶಾಕೀರ್‍ಸನ್ನದಿ, ಎಂ.ಎಂ.ಹಿಂಡಸಗೇರಿ, ವಿನಯ್‍ಕುಲಕರ್ಣಿ, ಡಾ.ನಲ್ವಾಡ್
ಉತ್ತರ ಕನ್ನಡ-ನಿವೇದಿತ ಆಳ್ವಾ, ಭೀಮಣ್ಣನಾಯ್ಕರ್, ಪ್ರಶಾಂತ್ ದೇಶಪಾಂಡೆ
ದಾವಣಗೆರೆ-ಶಾಮನೂರು ಶಿವಶಂಕರಪ್ಪ, ಮಂಜಪ್ಪ, ಎಚ್.ಎಂ.ರೇವಣ್ಣ
ಉಡುಪಿ-ಚಿಕ್ಕಮಗಳೂರು-ಬಿ.ಎಲ್.ಶಂಕರ್, ಪ್ರಮೋದ್ ಮದ್ವರಾಜ್, ಆರತಿ ಕೃಷ್ಣ
ದಕ್ಷಿಣ ಕನ್ನಡ-ಬಿ.ಕೆ.ಹರಿಪ್ರಸಾದ್, ರಮಾನಾಥರೈ, ಐವಾನ್ ಡಿಸೋಜ, ಮೊಹಿದ್ದೀನ್ ಭಾವ
ಮೈಸೂರು-ವಿಜಯ್‍ಶಂಕರ್, ಸೂರಜ್ ಹೆಗಡೆ
ಬೆಂಗಳೂರು ಉತ್ತರ- ಎಂ.ಆರ್.ಸೀತಾರಾಂ, ಸಿ.ನಾರಾಯಣಸ್ವಾಮಿ, ಬಿ.ಎಲ್.ಶಂಕರ್
ಬೆಂಗಳೂರು ಕೇಂದ್ರ-ರಿಜ್ವಾನ್ ಅರ್ಷದ್, ರೋಷನ್‍ಬೇಗ್, ಎಚ್.ಟಿ.ಸಾಂಗ್ಲಿಯಾನ
ಬೆಂಗಳೂರು ದಕ್ಷಿಣ-ರಾಮಲಿಂಗಾರೆಡ್ಡಿ, ಪ್ರಿಯಾಕೃಷ್ಣ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ