ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರಂತೆ ಕಾಣುತ್ತಾರೆ. ಜನರನ್ನು ಪ್ರೀತಿಸುವ ಬದಲು ಮೋದಿಯವರು ಜನರನ್ನು ಹೆದರಿಸುತ್ತಿದ್ದು, ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ನಟಿ, ರಾಜಕಾರಣಿ ವಿಜಯಶಂತಿ ವಾಗ್ದಾಳಿ ನಡೆಸಿದ್ದಾರೆ.
ತೆಲಂಗಾಣದ ಶಂಶಾಬಾದ್ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ವಿಜಯಶಾಂತಿ, ಪ್ರಧಾನಿ ಮೋದಿ ಆಡಳಿತದಲ್ಲಿ ಜನ ಹೆದರಿಕೆಯಲ್ಲಿ ಬದುಕುತ್ತಿದ್ದಾರೆ. ಅವರನ್ನು ನೋಡಿದರೆ ಉಗ್ರಗಾಮಿಯಂತೆ ಕಾಣಿಸುತ್ತಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಯಾವಾಗ ಬಾಂಬ್ ಸ್ಫೋಟ ಮಾಡುತ್ತಾರೆ ಎಂಬ ಭಯದಲ್ಲಿ ಇಡೀ ದೇಶದ ಜನ ಬದುಕುವಂತಾಗಿದೆ. ಅವರು ಸರ್ವಾಧಿಕಾರಿ ಧೋರಣೆಯ ಆಡಳಿತದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದಾರೆ. ನೋಟು ಅಮಾನ್ಯೀಕರಣದಿಂದ ಹಿಡಿದು ಜಿಎಸ್ಟಿ ಮತ್ತು ಪುಲ್ವಾಮಾ ದಾಳಿವರೆಗೆ ಮೋದಿ ಎಲ್ಲರನ್ನೂ ಹೆದರಿಸುತ್ತಿದ್ದಾರೆ. ಪ್ರತಿಯೊಂದು ವಿಷಯದಲ್ಲೂ ಅವರು ಇದೇ ಧೋರಣೆ ಅನುಸರಿಸುತ್ತಿದ್ದಾರೆ. ಮೋದಿ ಈ ಮೂಲಕ ಭಯೋತ್ಪಾದಕನಂತೆ ತೋರುತ್ತಾರೆ ಎಂದು ತಿಳಿಸಿದ್ದಾರೆ.
ಇನ್ನು ವಿಜಯ್ ಶಾಂತಿ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೂಡಲೇ ವಿಜಯಶಾಂತಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
PM Modi looks like a terrorist, says Congress leader Vijaya Shanti