ಬೆಂಗಳೂರು, ಮಾ.9- ವೈಟ್ಫೀಲ್ಡ್ ವಿಭಾಗದ ಪೊಲೀಸರು ಡಕಾಯಿತಿ, ಸುಲಿಗೆ, ಸರಗಳ್ಳತನ, ದರೋಡೆ, ಮನೆಗಳ್ಳತನ, ವಾಹನಗಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ 34 ಮಂದಿಯನ್ನು ಬಂಧಿಸಿ 88.38 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ, ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ರಕ್ತಚಂದನ ಸಾಗಾಟ ಪ್ರಕರಣದಲ್ಲಿ ಮೂರು ಮಂದಿಯನ್ನು ಬಂಧಿಸಿರುವ ಪೊಲೀಸರು 30 ಲಕ್ಷ ಬೆಲೆಯ ರಕ್ತಚಂದನವನ್ನು ವಶಪಡಿಸಿಕೊಂಡಿದ್ದಾರೆ.
ಮಾದಕ ದ್ರವ್ಯ ಗಾಂಜಾ ಮಾರಾಟ ಪ್ರಕರಣದಲ್ಲಿ 5 ಮಂದಿಯನ್ನು ಬಂಧಿಸಿರುವ ಪೊಲೀಸರು 4 ಲಕ್ಷ ಬೆಲೆಯ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಡಕಾಯಿತಿ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿ 6 ಲಕ್ಷ ರೂ. ಬೆಲೆ ಬಾಳುವ 200 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದರೆ, ಸುಲಿಗೆ ಪ್ರಕರಣದಲ್ಲಿ 7 ಮಂದಿಯನ್ನು ಬಂಧಿಸಿ 1.80 ಲಕ್ಷ ಬೆಲೆಬಾಳುವ 45 ಗ್ರಾಂ ಚಿನ್ನದ ಆಭರಣ, 3 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ.
ಮನೆಗಳ್ಳತನ ಪ್ರಕರಣದಲ್ಲಿ 9 ಮಂದಿಯನ್ನು ಬಂಧಿಸಿರುವ ಪೊಲೀಸರು 44.13 ಲಕ್ಷ ಬೆಲೆಬಾಳುವ 1 ಕೆಜಿ 359 ಗ್ರಾಂ ತೂಕದ ಚಿನ್ನಾಭರಣ, 700 ಗ್ರಾಂ ಬೆಳ್ಳಿ, 9 ಎಲ್ಇಡಿ ಟಿವಿಗಳು, ಎರಡು ಕ್ಯಾಮೆರಾ ಹಾಗೂ 1.2 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ 17 ಮಂದಿಯನ್ನು ಬಂಧಿಸಿರುವ ಪೊಲೀಸರು 31.95 ಲಕ್ಷ ಬೆಲೆಬಾಳುವ 61 ದ್ವಿಚಕ್ರ ವಾಹನಗಳು ಹಾಗೂ 11 ಗ್ರಾಂ ತೂಕದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.
ಜಾನುವಾರು ಸಾಗಾಟ ಪ್ರಕರಣದಲ್ಲಿ ನಾಲ್ವರು ಹಸುಗಳ್ಳರನ್ನು ಬಂಧಿಸಿರುವ ಪೊಲೀಸರು 8 ಲಕ್ಷ ರೂ. ಬೆಲೆಬಾಳುವ 16 ಸೀಮೆ ಹಸುಗಳನ್ನು ವಶಪಡಿಸಿಕೊಂಡಿದ್ದಾರೆ.