ಪ್ರಧಾನಿ ಮೋದಿ ಜನರ ಹಣವನ್ನು ಉದ್ಯಮಿಗಳ ಜೇಬಿಗೆ ಹಾಕಿದ್ದಾರೆ-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಹಾವೇರಿ, ಮಾ.9-ಮೋದಿ ಚೌಕೀದಾರ ಕೆಲಸ ಮಾಡುತ್ತಿದ್ದಾರೆ, ಆದರೆ ಜನಸಾಮಾನ್ಯರದ್ದಲ್ಲ. ಅನಿಲ್‍ಅಂಬಾನಿ, ಅದಾನಿಯಂತಹ ಶ್ರೀಮಂತ ಉದ್ಯಮಿಗಳ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಟೀಕಿಸಿದರು.

ಹಾವೇರಿಯ ಮುನಿಸಿಪಲ್‍ಹೈಸ್ಕೂಲ್ ಗ್ರೌಂಡ್‍ನಲ್ಲಿ ಇಂದು ನಡೆದ ಕಾಂಗ್ರೆಸ್ ಪರಿವರ್ತನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್‍ಗಾಂಧಿಯವರು, ಪ್ರಧಾನಿ ನರೇಂದ್ರ ಮೋದಿ ಅನಿಲ್‍ಅಂಬಾನಿ ಸೇರಿದಂತೆ 15 ಮಂದಿ ಉದ್ಯಮಿಗಳ 3 ಲಕ್ಷ ಸಾಲವನ್ನು ಮನ್ನಾ ಮಾಡಿದ್ದಾರೆ. ಜನರ ಹಣವನ್ನು ಉದ್ಯಮಿಗಳ ಜೇಬಿಗೆ ಹಾಕಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡಲಿಲ್ಲ ಎಂದು ಕಿಡಿಕಾರಿದರು.

ಕರ್ನಾಟಕ ಸರ್ಕಾರ ರೈತರಿಗೆ ಲಾಲಿಪಪ್ ನೀಡಿದೆ ಎಂದು ಮೋದಿ ಟೀಕಿಸಿದ್ದಾರೆ. ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಅದನ್ನು ನಾವು ಉಳಿಸಿಕೊಂಡಿದ್ದೇವೆ. ಕರ್ನಾಟಕದಲ್ಲಿ 11 ಸಾವಿರ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳಿದರು.

ಛತ್ತೀಸ್‍ಗಡ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ನಾವು ಅಧಿಕಾರಕ್ಕೆ ಬಂದ ಎರಡು ದಿನಗಳಲ್ಲೇ ಸಾಲ ಮನ್ನಾ ಮಾಡಿದ್ದೇವೆ. ಕಳೆದ ಲೋಕಸಭೆ ಚುನಾವಣೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ತಾವು ಪ್ರಧಾನಿಯಲ್ಲ, ದೇಶದ ಚೌಕೀದಾರ್ ಎಂದು ಹೇಳಿದ್ದರು. ಆದರೆ ಅದೇ ಚೌಕೀದಾರ್ ಈಗ ಕಳ್ಳನಾಗಿ ಬದಲಾಗಿದ್ದಾರೆ. ರಫೇಲ್ ಹಗರಣದಲ್ಲಿ 30 ಸಾವಿರ ಕೋಟಿ ರೂ.ಗಳನ್ನು ಕದ್ದು ಅನಿಲ್ ಅಂಬಾನಿಗೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಫ್ರಾನ್ಸ್ ನಿಯೋಗದಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಸಚಿವರು ಸೇರಿದಂತೆ ಪ್ರಮುಖರ್ಯಾರು ಇರಲಿಲ್ಲ. ರಫೇಲ್ ಒಪ್ಪಂದದ ಬಗ್ಗೆ ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿದ್ದ ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ರಫೇಲ್ ಹಗರಣದ ತನಿಖೆ ಆರಂಭಿಸಿದ ಸಿಬಿಐ ನಿರ್ದೇಶಕರನ್ನು ರಾತ್ರೋರಾತ್ರಿ ತೆಗೆದುಹಾಕುತ್ತಾರೆ.

ಸುಪ್ರೀಂಕೋರ್ಟ್ ಸಿಬಿಐ ನಿರ್ದೇಶಕರಿಗೆ ಮತ್ತೆ ಅಧಿಕಾರ ನೀಡುವಂತೆ ಸೂಚಿಸುತ್ತದೆ. ಆದರೂ ಮತ್ತೆ ಸಿಬಿಐ ನಿರ್ದೇಶಕರನ್ನು ಮೋದಿ ವಜಾಗೊಳಿಸುತ್ತಾರೆ. ತಾವು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿಕೊಳ್ಳುವ ಮೋದಿ ಖುದ್ಧು ಭ್ರಷ್ಟಾಚಾರಿ ಎಂದು ರಾಹುಲ್‍ಗಾಂಧಿ ವಾಗ್ದಾಳಿ ನಡೆಸಿದರು.

ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರ ಬಲಿದಾನ ಪ್ರಸ್ತಾಪಿಸಿದ ರಾಹುಲ್‍ಗಾಂಧಿ ಇದಕ್ಕೆ ಬಿಜೆಪಿಯೇ ಹೊಣೆ ಎಂದು ಆರೋಪಿಸಿದರು.

ಈ ಹಿಂದೆ ಕಂದಾಹಾರ ಪ್ರಕರಣದಲ್ಲಿ ಜೈಷ್-ಇ-ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂರ್ ಅಜರ್‍ನನ್ನು ಬಿಟ್ಟಿದ್ದು ಬಿಜೆಪಿ. ಇಂದು ಪ್ರಧಾನಮಂತ್ರಿಯವರ ಜೊತೆ ಭದ್ರತಾ ಸಲಹೆಗಾರರಾಗಿರುವ ಅಜಿತ್ ಧೋವಲ್, ಅಂದಿನ ರಕ್ಷಣಾ ಮಂತ್ರಿ ಯಶ್ವಂತ್‍ಸಿಂಗ್ ಅವರು ಜೈಲಿನಲ್ಲಿದ್ದ ಮಸೂರ್ ಅಜರ್‍ನನ್ನು ಬಿಟ್ಟು ಕಳುಹಿಸಿದರು. ಇಂದು ಅದೇ ಮಸೂರ್ ಅಜರ್ ಜೈಷ್-ಇ-ಮೊಹಮ್ಮದ್ ಸಂಘಟನೆ ಪುಲ್ವಾಮಾ ದಾಳಿ ನಡೆಸಿದೆ. ಇದಕ್ಕೆ ನೀವೇ ನೇರ ಹೊಣೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಪ್ರಧಾನಿಯವರ ಜೊತೆ ಮಾತುಕತೆ ನಡೆಸುವಾಗ ದೋಕ್ಲಾಮ್‍ನಲ್ಲಿ ಚೀನಾದ ಸೈನಿಕರು ಭಾರತದ ಗಡಿಯೊಳಗೆ ನುಗ್ಗಿದ್ದರು. ದೇಶದ ಭದ್ರತೆ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಹೇಳಿದರು.

ಸಂಸತ್‍ನಲ್ಲಿ ನಾನು ಕೇಳಿದ ಪ್ರಶ್ನೆಗೆ ನರೇಂದ್ರ ಮೋದಿಯವರು ನನಗೆ ಉತ್ತರ ನೀಡಲಾಗದೆ ಪಲಾಯನವಾದ ಮಾಡಿದರು ಎಂದು ನೇರ ಆರೋಪ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ರಾಹುಲ್‍ಗಾಂಧಿಯವರಿಗೆ ಬೆಳ್ಳಿ ಗದೆ ಮತ್ತು ಕೆಂಪುಕೋಟೆಯ ಪ್ರತಿಕೃತಿ ಇರುವ ಫಲಕ ನೀಡಿ ಸನ್ಮಾನಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷರಾದ ಎಚ್.ಕೆ.ಪಾಟೀಲ್, ಸಂಸದರಾದ ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಸಚಿವರಾದ ಡಿ.ಕೆ.ಶಿವಕುಮಾರ್, ಜಮೀರ್ ಅಹಮ್ಮದ್ ಖಾನ್, ಶಾಸಕರಾದ ಬಿ.ಸಿ.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ, ಎನ್‍ಎಸ್‍ಯುಐ ಮಂಜುನಾಥ್, ಜಿಲ್ಲಾ ಘಟಕದ ಅಧ್ಯಕ್ಷ ಹಿರೇಮಠ್, ಗದಗದ ಅಧ್ಯಕ್ಷ ಜಿ.ಎಸ್.ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ